ಕೋವಿಡ್-19 ಕಾರಣದಿಂದ ಈ ವರ್ಷದ ಎಲ್ಲಾ ಹಬ್ಬಗಳೂ ಭಿನ್ನವಾಗಿ ಆಚರಿಸಲ್ಪಡುತ್ತಿವೆ. ಮನುಕುಲಕ್ಕೆ ಬಲು ಕಾಟ ಕೊಡುತ್ತಿರುವ ಈ ವೈರಸ್ ವಿರುದ್ಧ ಜಾಗೃತಿ ಮೂಡಿಸುವ ಥೀಮ್‌ಗಳನ್ನು ಇಟ್ಟುಕೊಂಡು ಪ್ರತಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವ ಅದೆಷ್ಟೋ ಘಟನೆಗಳು ಅಂತರ್ಜಾಲದಲ್ಲಿ ಟ್ರೆಂಡ್ ಆಗಿವೆ.
ಕ್ರಿಸ್‌ಮಸ್ ಸಮೀಪಿಸುತ್ತಿರುವ ವೇಳೆ ಸಾಂಟಾ ಕ್ಲಾಸ್ ವೇಷಧಾರಿಯಾಗಿರುವ ಮುಂಬೈನ ಅಶೋಕ್ ಕುರ್ಮಿ, ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಮೂಲಕ ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.
ಮಾಯಾನಗರಿಯ ಸಾಯನ್ ಪ್ರದೇಶದ ಗೆಳೆಯರ ಬಳಗದ ಅಧ್ಯಕ್ಷರಾದ ಅಶೋಕ್ ತಮ್ಮ ಈ ಕೈಂಕರ್ಯದ ಬಗ್ಗೆ ಮಾತನಾಡಿ, “ಪ್ರತಿ ವರ್ಷ ಮಕ್ಕಳಿಗೆ ಆಟಿಕೆಗಳು, ಚಾಕಲೇಟ್‌ಗಳು ಹಾಗೂ ಉಡುಗೊರೆಗಳನ್ನು ಕೊಡುವ ಮೂಲಕ ಕ್ರಿಸ್‌ಮಸ್ ಆಚರಿಸುತ್ತಿದ್ದೆ. ಆದರೆ ಈ ವರ್ಷದ ಹಬ್ಬದಂದು ಕೋವಿಡ್-19 ಕಾರಣದಿಂದಾಗಿ ಬಸ್ ನಿಲ್ದಾಣಗಳು, ಆಟೋಗಳು ಹಾಗೂ ಇತರ ಜಾಗಗಳನ್ನು ಸ್ಯಾನಿಟೈಸ್ ಮಾಡಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.