ವಿಶ್ವದಾದ್ಯಂತ ಅಪ್ಪಳಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಅನೇಕರನ್ನ ನಿರುದ್ಯೋಗಿಗಳನ್ನಾಗಿ ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇದೇ ರೀತಿ ಕೊರೊನಾದ ಬಳಿಕ ಕೆಲಸ ಕಳೆದುಕೊಂಡು ತಾಯಿ ಪಡುತ್ತಿದ್ದ ಕಷ್ಟವನ್ನ ನೋಡಲಾಗದ ಬಾಲಕನೊಬ್ಬ ಸ್ವಂತ ಉದ್ಯಮ ಶುರು ಮಾಡಿದ್ದಾನೆ.
ಮುಂಬೈನ 14 ವರ್ಷದ ಬಾಲಕ ಸುಭಾನ್ ತಾಯಿ ಶಾಲಾ ಬಸ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಅವರನ್ನ ಕೆಲಸದಿಂದ ತೆಗೆಯಲಾಗಿದೆ. ತಂದೆ ನಿಧನರಾಗಿದ್ದರಿಂದ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಸುಭಾನ್ ತಾಯಿ ಕೆಲಸ ಹೋದ ಬಳಿಕ ಕಂಗಾಲಾಗಿದ್ರು. ಆದರೆ ತಾಯಿಯ ಕಷ್ಟಕ್ಕೆ ಹೆಗಲಾದ ಸುಭಾನ್ ನಾಗ್ಬಾಡ, ಬಿಂಡಿ ಬಝಾರ್ ಮತ್ತಿತ್ತರ ಪ್ರದೇಶಗಳಲ್ಲಿ ಚಹಾ ಮಾರಲು ಆರಂಭಿಸಿದ್ದಾನೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬಾಲಕ ಸುಭಾನ್, ನನ್ನ ತಂದೆ 12 ವರ್ಷಗಳ ಹಿಂದೆ ನಿಧನರಾದ್ರು. ಶಾಲೆಗಳು ಮುಚ್ಚಿರೋದ್ರಿಂದ ತಾಯಿಯ ಕೆಲಸವೂ ಹೋಗಿದೆ. ಹೀಗಾಗಿ ನಾನು ಚಹ ಮಾರುವ ಕೆಲಸ ಶುರು ಮಾಡಿದ್ದೇನೆ. ನನ್ನ ಸಹೋದರಿಯರು ಆನ್ಲೈನ್ ಕ್ಲಾಸ್ನಲ್ಲಿ ಅಧ್ಯಯನ ಮಾಡ್ತಾರೆ. ನಾನು ಶಾಲೆ ಪುನಾರಂಭವಾಗ್ತಿದ್ದಂತೆಯೇ ಶಿಕ್ಷಣ ಮುಂದುವರಿಸುತ್ತೇನೆ. ಸದ್ಯ ಈ ಉದ್ಯಮದಿಂದ ಒಂದು ದಿನಕ್ಕೆ ಸರಿ ಸುಮಾರು 400 ರೂ.ಗಳಿಸಿ ಅದನ್ನ ತಾಯಿಗೆ ನೀಡುತ್ತಿದ್ದೇನೆ ಅಂತಾ ಹೇಳಿದ್ದಾನೆ.