
ಕೊರೊನಾದಿಂದ ಚೇತರಿಸಿಕೊಂಡವರಿಗೆ ʼಬ್ಲಾಕ್ ಫಂಗಸ್ʼ ಸಮಸ್ಯೆ ಕಾಡ್ತಿದೆ. ದೇಶದಲ್ಲಿ ಬ್ಲ್ಯಾʼಬ್ಲಾಕ್ ಫಂಗಸ್ʼ ನ ಕೆಲ ಪ್ರಕರಣ ಬೆಳಕಿಗೆ ಬಂದಿದೆ. ಈ ʼಬ್ಲಾಕ್ ಫಂಗಸ್ʼ ಲಕ್ಷಣವೇನು…? ಅದನ್ನು ಹೇಗೆ ಪತ್ತೆ ಹಚ್ಚಬೇಕು ಮತ್ತು ಅದನ್ನು ತಡೆಗಟ್ಟುವ ಮಾರ್ಗವೇನು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ.
ಹರ್ಷ್ ವರ್ಧನ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮ್ಯೂಕೋರ್ಮೈಕೋಸಿಸ್, ಶಿಲೀಂದ್ರಗಳ ಸೋಂಕು. ಆರೋಗ್ಯ ಸಮಸ್ಯೆಗಳಿರುವವರ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹರ್ಷ್ ವರ್ಧನ್ ಹೇಳಿದ್ದಾರೆ. ಆರಂಭದಲ್ಲಿಯೇ ಚಿಕಿತ್ಸೆ ನೀಡಿದಲ್ಲಿ ಚೇತರಿಕೆ ಸಾಧ್ಯವೆಂದು ಅವರು ಹೇಳಿದ್ದಾರೆ.
ರೋಗಿ ʼಬ್ಲಾಕ್ ಫಂಗಸ್ʼ ಗೆ ಹೇಗೆ ಒಳಗಾಗುತ್ತಾನೆ ಎಂಬುದನ್ನು ಹರ್ಷ್ ವರ್ಧನ್ ಹೇಳಿದ್ದಾರೆ. ವೊರಿಕೊನಜೋಲ್ ಚಿಕಿತ್ಸೆಗೆ ಒಳಗಾದವರು, ಅನಿಯಂತ್ರಿತ ಡಯಾಬಿಟಿಸ್ ನಿಂದ ಬಳಲುತ್ತಿರುವವರು, ಸ್ಟಿರಾಯ್ಡ್ ಬಳಕೆ, ದೀರ್ಘಕಾಲ ಐಸಿಯುವಿನಲ್ಲಿರುವವರಿಗೆ ಇದು ಹೆಚ್ಚು ಅಪಾಯಕಾರಿ. ತಲೆನೋವು, ಕಣ್ಣು, ಮೂಗಿನ ಸುತ್ತಲೂ ನೋವು, ಕೆಂಪಾಗುವುದು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ ಮತ್ತು ಬದಲಾದ ಮಾನಸಿಕ ಸ್ಥಿತಿ ಇವು ಇದ್ರ ರೋಗ ಲಕ್ಷಣವಾಗಿದೆ. ರೋಗ ಉಲ್ಬಣಿಸುವ ಮೊದಲು ಜನರು ವೈದ್ಯರನ್ನು ಭೇಟಿಯಾಗಬೇಕು.
ಬ್ಲಾಕ್ ಫಂಗಸ್ ಬರದಂತೆ ತಡೆಯಲು ಹೈಪರ್ಗ್ಲೈಕೆಮಿಯಾವನ್ನು ನಿಯಂತ್ರಿಸಬೇಕು. ಕೋವಿಡ್ -19ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಮತ್ತು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು. ಸ್ಟಿರಾಯ್ಡ್ ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬೇಕು. ಆಕ್ಸಿಜನ್ ಥೆರಪಿ ವೇಳೆ ಶುದ್ಧ, ಕ್ರಿಮಿನಾಶಕ ನೀರನ್ನು ಬಳಸಬೇಕು. ಎಂಟಿಬಯೋಟಿಕ್ ಹಾಗೂ ಎಂಟಿ ಫಂಗಲ್ ಮಾತ್ರೆಗಳನ್ನು ಸರಿಯಾಗಿ ಬಳಸಬೇಕು.
ಮೂಗು ಸದಾ ಕಟ್ಟುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ರೋಗ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಆದಷ್ಟು ಬೇಗ ಚಿಕಿತ್ಸೆ ಶುರು ಮಾಡಿ ಎಂದು ಹರ್ಷ್ ವರ್ಧನ್ ತಿಳಿಸಿದ್ದಾರೆ.