ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಂತ್ರಾಲಯ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದೊಂದಿಗೆ ನಗರ ಮತ್ತು ಗ್ರಾಮೀಣ ಭಾಗದ ಯುವಕರಿಗೆ ದೇಶದ ಎಲ್ಲ ಭಾಗದಲ್ಲಿ ಸ್ವಂತ ಉದ್ದಿಮೆ ಸ್ಥಾಪಿಸಲು ಆರ್ಥಿಕ ಸಹಾಯ ಒದಗಿಸಲಿದೆ.
ಹೊಸದಾಗಿ ಸ್ವಂತ ಸಣ್ಣ ಉದ್ದಿಮೆ ಸ್ಥಾಪಿಸಲು ಬಯಸುವವರಿಗೆ ಉತ್ಪಾದನಾ ಕ್ಷೇತ್ರದ ಉದ್ಯೋಗದ ಸಲುವಾಗಿ ಗರಿಷ್ಠ 25 ಲಕ್ಷ ರೂ., ಸೇವಾ ಕ್ಷೇತ್ರದ ಸಲುವಾಗಿ ಗರಿಷ್ಠ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಯೋಜನಾ ವೆಚ್ಚದ ಶೇಕಡ 15 ರಿಂದ 35 ರಷ್ಟು ಸಬ್ಸಿಡಿ ಇರುತ್ತದೆ. ಫಲಾನುಭವಿಗಳು ಯೋಜನಾ ವೆಚ್ಚದ ಶೇಕಡ 5 ರಿಂದ 10 ರಷ್ಟು ಪಾವತಿಸಬೇಕಿದೆ.
ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆ, ಮುದ್ರಾ ಯೋಜನೆಗಳ ಮೂಲಕ ಸಾಲ ಪಡೆದು ಉತ್ತಮವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳನ್ನು ವಿಸ್ತರಿಸಲು ಎರಡನೇ ಆರ್ಥಿಕ ಸಹಾಯ ಒದಗಿಸಲಾಗುವುದು. ಉತ್ಪಾದನಾ ಕ್ಷೇತ್ರದ ಸಲುವಾಗಿ 1 ಕೋಟಿ ರೂಪಾಯಿವರೆಗೆ, ಸೇವಾ ಕ್ಷೇತ್ರಕ್ಕೆ 25 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡಲಾಗುವುದು. ಯೋಜನಾ ವೆಚ್ಚದ ಶೇಕಡ 15 ರಿಂದ 20 ರಷ್ಟು ಸಬ್ಸಿಡಿ ಇರುತ್ತದೆ.
18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು, ಸ್ವಸಹಾಯ ಗುಂಪುಗಳು ಸೌಲಭ್ಯ ಪಡೆಯಬಹುದು. 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ 8 ನೇತರಗತಿ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಯೋಜನೆ ಕುರಿತಾದ ಹೆಚ್ಚಿನ ವಿವರಗಳಿಗೆ www.msme.gov.in ಮತ್ತು www.kviconline.gov.in/pmegpeportal ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.