ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಂಗವಾನ್ ಪಟ್ಟಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಆರೋಪದ ಮೇಲೆ ಬಂಧಿತಳಾಗಿದ್ದ ಯುವತಿ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
20 ವರ್ಷದ ಯುವತಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದು 10 ದಿನಗಳ ಕಾಲ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ನ್ಯಾಯಾಧೀಶರ ಎದುರು ಯುವತಿ ಹೇಳಿಕೆ ನೀಡಿದ್ದಾಳೆ.
10 ದಿನ ಲಾಕಪ್ ನಲ್ಲಿದ್ದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಮೂವರು ಕಾನ್ ಸ್ಟೇಬಲ್ ಗಳು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ನಂತರ ಬೆದರಿಕೆ ಹಾಕಿದ ಪೊಲೀಸರು, ಕೊಲೆ ಪ್ರಕರಣದಲ್ಲಿ ತಂದೆಯನ್ನು ಆರೋಪಿಯನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಮಹಿಳಾ ಪೊಲೀಸರು ತನ್ನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ನ್ಯಾಯಾಧೀಶರು ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ವರದಿ ನೀಡುವಂತೆ ರೇವಾ ಪೊಲೀಸ್ ಅಧೀಕ್ಷಕ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ. ಜೈಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುವತಿ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ತಿಳಿಸಿದ್ದಾಳೆ.
ಮೇ 9 ರಿಂದ 21 ರವರೆಗೆ ಲಾಕ್ ಅಪ್ ನಲ್ಲಿದ್ದ ವೇಳೆ ಅತ್ಯಾಚಾರ ಎಸಗಿದ್ದು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿದ್ದಾಳೆ. ಆದರೆ, ಯುವತಿಯ ಆರೋಪವನ್ನು ಪೊಲೀಸರು ನಿರಾಕರಿಸಿದ್ದು ಆಕೆಯನ್ನು ಮೇ 21 ರಂದು ಬಂಧಿಸಲಾಗಿದೆ. ಹೀಗಿರುವಾಗ ಅತ್ಯಾಚಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.