ವಿದ್ಯುತ್ ಬಿಲ್ ಪಾವತಿ ಮಾಡದೇ ಇದ್ದ ಕಾರಣ ವಿದ್ಯಾತ್ ಸರಬರಾಜು ಇಲಾಖೆ, ತನ್ನ ಗೋಧಿ ಗಿರಣಿ ಹಾಗೂ ಮೋಟರ್ ಬೈಕ್ ಅನ್ನು ವಶಕ್ಕೆ ಪಡೆದ ಕಾರಣ ಮಧ್ಯ ಪ್ರದೇಶದ ಛತ್ತರ್‌ಪುರ ಜಿಲ್ಲೆಯ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುನೇಂದ್ರ ರಜಪೂತ್ ಹೆಸರಿನ 35 ವರ್ಷದ ಈತ ಆತ್ಮಹತ್ಯಾ ನೋಟ್ ಬರೆದಿಟ್ಟಿದ್ದು, ತನ್ನ ದೇಹದ ಭಾಗಗಳನ್ನು ಸರ್ಕಾರಕ್ಕೆ ಕೊಟ್ಟು, ಅವುಗಳನ್ನು ಮಾರಿ ಬಾಕಿ ಪಾವತಿ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ. ರಜಪೂತ್ 87 ಸಾವಿರ ರೂ.ಗಳಷ್ಟು ವಿದ್ಯುತ್ ಬಿಲ್ ಪಾವತಿ ಮಾಡುವುದು ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.
ಜಿಲ್ಲಾ ಕೇಂದ್ರದಿಂದ 18ಕಿಮೀ ದೂರದಲ್ಲಿರುವ ಮಾತ್ಗುವಾ ಗ್ರಾಮದ ರೈತರಾದ ರಜಪೂತ್, ಬೆಳೆ ವೈಫಲ್ಯ ಹಾಗೂ ಶಾರ್ಟ್ ಸರ್ಕ್ಯೂಟ್‌ನಿಂದ ತಮ್ಮ ಎಮ್ಮೆಯನ್ನು ಕಳೆದುಕೊಂಡ ಕಾರಣ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ್ದರು. ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಕಳೆದ ಹತ್ತು ತಿಂಗಳುಗಳಿಂದ ಯಾವುದೇ ಕೆಲಸವಿಲ್ಲದೇ ಗೋಧಿ ಗಿರಣಿಯ ಸಂಪಾದನೆಯೂ ಇಲ್ಲದಂತಾಗಿತ್ತು.
ಜಿಲ್ಲಾ ಕಲೆಕ್ಟರ್ ಶೀಲೇಂದ್ರ ಸಿಂಗ್ ಮೃತ ರೈತನ ಕುಟುಂಬಕ್ಕೆ 25 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ಕುಟುಂಬಕ್ಕೆ ಕೊಟ್ಟಿದ್ದಾರೆ.