ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಳಿಕ ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಲವ್ ಜಿಹಾದ್ ವಿರುದ್ಧ ಸಮರ ಸಾರಿದ್ದಾರೆ.
ಶನಿವಾರ ಧಾರ್ಮಿಕ ಮತಾಂತರ ವಿರೋಧಿ ಕಾನೂನನ್ನ ಮಧ್ಯಪ್ರದೇಶ ಕ್ಯಾಬಿನೆಟ್ ಅಂಗೀಕರಿಸಿದೆ.
ಈ ಮಸೂದೆ ಜಾರಿಗೆ ಬಂದ ಬಳಿಕ ಲವ್ ಜಿಹಾದ್ ಆರೋಪ ಸಾಬೀತಾದ ವ್ಯಕ್ತಿಗೆ 10 ವರ್ಷಗಳ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತೆ.
ವಿಧಾನಸಭೆ ಅಧಿವೇಶನಕ್ಕೂ ಮುನ್ನ ಶನಿವಾರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ನೇತೃತ್ವದ ಸಂಪುಟ ಸಭೆಯಲ್ಲಿ ಧರ್ಮ ಸ್ವಾತಂತ್ರ್ಯ ಸಭೆ 2020ಯನ್ನ ಅಂಗೀಕರಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ. ಹಾಗೂ ರಾಜ್ಯಪಾಲರ ಅಂಕಿತದ ಬಳಿಕ ಮಸೂದೆ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಈ ಮಸೂದೆಯ ಪ್ರಕಾರ ವ್ಯಕ್ತಿಯ ಜೊತೆಗೆ ಆತನಿಗೆ ಸಹಾಯ ಮಾಡಿದ ಸಂಘಟನೆಗಳ ಮೇಲೂ ಪ್ರಕರಣ ದಾಖಲಿಸಬಹುದಾಗಿದೆ. ಈ ಆರೋಪದಡಿಯಲ್ಲಿ ಕನಿಷ್ಟ 25 ಸಾವಿರ ರೂಪಾಯಿ ದಂಡ ಹಾಗೂ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತೆ. ಒಂದು ವೇಳೆ ಎಸ್ಸಿ & ಎಸ್ಟಿಗೆ ಸೇರಿದ ವ್ಯಕ್ತಿ ಮತಾಂತರಗೊಂಡರೆ ಅವರಿಗೆ 2 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಟ 1 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.