
ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ ಸಾಗಬೇಕು.
22 ಕಿಲೋ ಮೀಟರ್ ಉದ್ದ ಮತ್ತು 9 ಕಿಲೋ ಮೀಟರ್ ವಿಸ್ತಾರದ ಅಪರೂಪದ ಕಲ್ಲು ಬಂಡೆಗಳಿಂದ ಕೂಡಿರುವ ಪ್ರಸ್ಥಭೂಮಿಯನ್ನು ರೂಪಿಸಿದೆ. ಸಮುದ್ರಮಟ್ಟದಿಂದ 1722 ಮೀಟರ್ ಎತ್ತರದ ಪ್ರದೇಶದಲ್ಲಿರುವ ಗುರು ಶಿಖರ ಪ್ರಮುಖ ಶಿಖರವಾಗಿದೆ.
ನಿತ್ಯ ಹರಿದ್ವರ್ಣದ ಕಾಡುಗಳು, ಹಲವು ಸರೋವರ, ಜಲಪಾತ, ನದಿಗಳ ತವರುಮನೆಯಂತಿದೆ. ಈ ಕಾರಣಗಳಿಂದ ಇದನ್ನು ಮರುಭೂಮಿಯಲ್ಲಿರುವ ಓಯಸಿಸ್ ಎಂದು ಕರೆಯಲಾಗುತ್ತದೆ.
ಮೌಂಟ್ ಅಬು ಪರ್ವತದಲ್ಲಿ ಹಲವಾರು ಮಂದಿರಗಳಿವೆ. ಜೈನ ಮಂದಿರಗಳು, ದಿಲ್ ವಾರ ಮಂದಿರ, ವಿಮಲ್ ವಾಸಾಹಿ ಮಂದಿರ, ಅಚಲ್ ಘರ್ ಕೋಟೆ, ಕಾಂತಿನಾಥ ದೇವಾಲಯ, ಓಂ ಶಾಂತಿ ಭವನ, ಬ್ರಹ್ಮಕುಮಾರಿ ಮ್ಯೂಸಿಯಂ, ಪೀಸ್ ಪಾರ್ಕ್, ಅಧರ್ ದೇವಿ ದೇವಾಲಯ, ದತ್ತಾತ್ರೇಯ ದೇವಾಲಯ, ದುರ್ಗಾ ದೇವಾಲಯ, ಅಂಬಿಕಾ ಮಾತೆ ದೇವಾಲಯ, ಅರಮನೆ, ಸರೋವರ ಮೊದಲಾದವು ನೋಡಬಹುದಾದ ಸ್ಥಳಗಳಾಗಿವೆ.
ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿದ್ದು, ಅನೇಕ ಪ್ರಾಣಿ, ಪಕ್ಷಿ ಸಂಕುಲಗಳು ಇಲ್ಲಿವೆ. ಗುರು ಶಿಖರದ ಬೆಟ್ಟದ ಮೇಲಿನಿಂದ ಭಾರತ – ಪಾಕಿಸ್ತಾನ ಗಡಿ ಪ್ರದೇಶವನ್ನು ನೋಡಬಹುದಾಗಿದೆ.
ಹಿಂದೆ ಅರ್ಬುದ ಬೆಟ್ಟ ಎಂದು ಕರೆಯಲ್ಪಡುತ್ತಿದ್ದ ಮೌಂಟ್ ಅಬು ಪ್ರಮುಖ ಧಾರ್ಮಿಕ, ಪ್ರವಾಸಿ ಸ್ಥಳವಾಗಿದೆ. ಗುಜರಾತ್, ರಾಜಸ್ತಾನದ ಜನ ಬೇಸಿಗೆಯನ್ನು ಕಳೆಯಲು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ನೀವೂ ಒಮ್ಮೆ ಹೋಗಿ ಬನ್ನಿ. ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.