ಪ್ರಕೃತಿಯ ನಿಯಮಗಳಿಗಿಂತಲೂ ತಾಯ್ತನದ ಶಕ್ತಿ ದೊಡ್ಡದು ಎನ್ನುವ ಮಾತಿದೆ. ಈ ಮಾತಿಗೆ ಅನ್ವರ್ಥವಾಗುವ ನಿದರ್ಶನವೊಂದರಲ್ಲಿ ತಾಯಿ ಬಾತುಕೋಳಿಯೊಂದು ತನ್ನ ಮರಿಗಳನ್ನು ರಕ್ಷಿಸಲು ಬೇಟೆಯಾಡಲು ಬಂದ ಹಾವಿಗೆ ತನ್ನ ಪ್ರಾಣವನ್ನೇ ಅರ್ಪಿಸಿಕೊಂಡ ವಿಡಿಯೋವೊಂದು ನೆಟ್ಟಿಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್ ಈ ವಿಡಿಯೋ ಶೇರ್ ಮಾಡಿದ್ದಾರೆ.
ಡಜನ್‌ನಷ್ಟು ಇರುವ ಬಾತುಕೋಳಿ ಮರಿಗಳು ತಮ್ಮ ತಾಯಿಯೊಂದಿಗೆ ಬಿಲವೊಂದರಲ್ಲಿ ಇರುವುದನ್ನು ನೋಡಬಹುದಾಗಿದೆ. ಹಾವೊಂದು ಈ ಬಿಲದೊಳಗೆ ಹರಿದುಕೊಂಡು ಬಂದು ಮರಿಗಳನ್ನು ತಿನ್ನುವುದರಲ್ಲಿ ಇತ್ತು.
ಅಪಾಯವನ್ನು ಅರಿತ ತಾಯಿ ಬಾತುಕೋಳಿ, ತನ್ನ ಮರಿಗಳನ್ನು ಬಿಲದಿಂದ ಹೊರಗೆ ತಳ್ಳುತ್ತಾ, ಇದೇ ವೇಳೆ ಹಾವಿನಿಂದ ಅವುಗಳನ್ನು ರಕ್ಷಿಸಲು ತನ್ನ ರೆಕ್ಕೆಗಳನ್ನು ಜೋರಾಗಿ ಬಡಿಯುತ್ತಿರುವುದನ್ನು ಕಾಣಬಹುದಾಗಿದೆ. ನೋಡನೋಡುತ್ತಲೇ ಹಾವು ಬಾತುಕೋಳಿಯನ್ನು ಸುತ್ತಿಕೊಳ್ಳುತ್ತದೆ.
“ಇದನ್ನು ನೋಡಲು ಬೇಸರವಾಗುತ್ತದೆ. ಆದರೆ ಪ್ರಕೃತಿಯ ನಿಯಮವೇ ಹಾಗಿದೆ. ಹಾವಿನ ಆಹಾರವನ್ನು ಕಿತ್ತುಕೊಳ್ಳುವಂತೆಯೂ ಇಲ್ಲ” ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದರೆ, “ತಾಯಿ ಪ್ರೀತಿ ಪ್ರಕೃತಿ ನಿಯಮವನ್ನೂ ಮೀರಿದ್ದು, ಅದು ಮಾನವರೇ ಇರಲಿ ಪ್ರಾಣಿಗಳೇ ಇರಲಿ” ಎಂದಿದ್ದಾರೆ.