ಹಲವರನ್ನು ಬಲಿ ಪಡೆದಿರುವ ಕೊರೊನಾ, ಇಂದಿಗೂ ಅನೇಕರನ್ನು ಕಾಡುತ್ತಿದ್ದು, ಜಗತ್ತಿನ ಹಿಡಿಶಾಪಕ್ಕೆ ಗುರಿಯಾಗಿದೆ.
ಆದರೆ, ಅಪವಾದ ಎಂಬಂತೆ ಆಂಧ್ರಪ್ರದೇಶದಲ್ಲಿ 4 ವರ್ಷದ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದುಗೂಡಿಸುವಲ್ಲಿ ಕೊರೊನಾ ಪ್ರಮುಖ ಪಾತ್ರ ವಹಿಸಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಪಲಕೊಳ್ಳು ಎಂಬಲ್ಲಿ ಬೋಬ್ಬ ಶ್ರೀಲಲಿತಾ ಎಂಬಾಕೆ ಗಂಡನನ್ನು ಕಳೆದುಕೊಂಡು ಮನೆಗೆಲಸ ಮಾಡಿಕೊಂಡು ಇಬ್ಬರು ಗಂಡುಮಕ್ಕಳನ್ನು ಸಾಕುತ್ತಾ ಇದ್ದರು. ಜೊತೆಗೆ ಮಕ್ಕಳನ್ನು ಸಾಕುವುದಕ್ಕಾಗಿ ಚಿಂದಿ ಆಯುವ ಕಾಯಕವನ್ನೂ ಮಾಡುತ್ತಿದ್ದರು.
ಕಿತ್ತು ತಿನ್ನುವ ಬಡತನದಿಂದಾಗಿ ಎರಡನೇ ಮಗ ಶ್ರೀನಿವಾಸ 2016 ರಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದ. ರೈಲಿನ ಮೂಲಕ ವಿಜಯವಾಡ ತಲುಪಿದ್ದ. ರೈಲ್ವೆ ನಿಲ್ದಾಣದಲ್ಲಿದ್ದ ಶ್ರೀನಿವಾಸನನ್ನು ಗಮನಿಸಿದ ವಿಜಯವಾಡ ರೈಲ್ವೆ ಪೊಲೀಸರು ಮಕ್ಕಳ ಆರೈಕೆ ಕೇಂದ್ರದಲ್ಲಿ ಇರಿಸಿದ್ದರು. ಇತ್ತ ಶ್ರೀನಿವಾಸನಿಗಾಗಿ ಹುಡುಕಿ ಸುಸ್ತಾದ ತಾಯಿ, ಆತನ ಬರುವಿಕೆಯ ನಿರೀಕ್ಷೆಯಲ್ಲಿ ಸುಮ್ಮನಾಗಿದ್ದರು.
ಆಂಧ್ರಪ್ರದೇಶದ ಪ್ರತಿಯೊಬ್ಬರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲು ಅಲ್ಲಿನ ಸರ್ಕಾರವು ಆಪರೇಶನ್ ಮಸ್ಕಾನ್ ಹೆಸರಿನಲ್ಲಿ ಕೊರೊನಾ ಪರೀಕ್ಷೆ ಅಭಿಯಾನ ನಡೆಸಿತು. ಈ ವೇಳೆ ಮಕ್ಕಳ ಆರೈಕೆ ಕೇಂದ್ರದಲ್ಲಿದ್ದ ಶ್ರೀನಿವಾಸನ ಹಿನ್ನೆಲೆ ತಿಳಿದು, ತಾಯಿಯೊಂದಿಗೆ ಸೇರಿಸಿದ್ದಾರೆ. ಅಲ್ಲದೆ, ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದ 10 ಮಂದಿ ಬಿಹಾರದ ಮಕ್ಕಳನ್ನೂ ಕಾರ್ಯಾಚರಣೆ ವೇಳೆ ರಕ್ಷಿಸಲಾಗಿದೆ. ಜುಲೈ 20 ರವರೆಗೆ ಈ ತಪಾಸಣಾ ಅಭಿಯಾನ ಮುಂದುವರಿಯಲಿದೆ.