ಮರಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಮಂಗವೊಂದು ಮೃತಪಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಖಮ್ಮಾಮ್ ಜಿಲ್ಲೆಯ ಸೇತುಪಲ್ಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಮರವೇರಿದ ಮಂಗ ಉರುಳಿಗೆ ಸಿಲುಕಿ ನೇಣು ಕಳೆದುಕೊಂಡಿದೆ.
ಕಣ್ಣೆದುರು ಕುಣಿಕೆಯಲ್ಲಿ ವಿಲವಿಲನೆ ಒದ್ದಾಡುತ್ತಿದ್ದ ಸಂಗಾತಿಯನ್ನು ಕಂಡ ಇತರ ಕೋತಿಗಳೂ ಗಾಬರಿಯಾಗಿವೆ. ಒದ್ದಾಡಿ ಒದ್ದಾಡಿ ಕೊನೆಗದು ಕೊನೆಯುಸಿರೆಳೆದಿದೆ. ಮೂರ್ನಾಲ್ಕು ದಿನದ ಹಿಂದೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿ ಎ.ವೆಂಕಟೇಶ್ವರುಲು ಅವರು, ಸುತ್ತಮುತ್ತಲ ಗ್ರಾಮಸ್ಥರ ಪ್ರಕಾರ ಮಂಗಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ ಕೆಲವರು ಉರುಳು ಹಾಕಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯೂ ತಪ್ಪೊಪ್ಪಿಕೊಂಡಿದ್ದು, ಉಳಿದ ಮಂಗಗಳು ಉರುಳಿಗೆ ಸಿಕ್ಕಿಲ್ಲವಲ್ಲ ಎಂಬುದಷ್ಟೆ ಸಮಾಧಾನದ ಸಂಗತಿ ಎಂದಿದ್ದಾರೆ.
ಸೇತುಪಲ್ಲಿ ಅರಣ್ಯ ಪ್ರದೇಶದ ಶೇ.30 ರಷ್ಟು ನಾಶವಾಗಿದ್ದು, ಹಣ್ಣು ಬಿಡುವ ಸಸಿಗಳನ್ನು ನೆಟ್ಟು ಬೆಳೆಸಲು ಸರ್ಕಾರ ನಿರ್ದೇಶನ ನೀಡಿದೆ. ವನ್ಯಪ್ರಾಣಿಗಳಿಗೆ ಆಹಾರ ಸಿಗುವಂತೆ ಮಾಡಿದರೆ, ಸುತ್ತಲ ಗ್ರಾಮಕ್ಕೆ ಕಾಲಿಡುವುದಿಲ್ಲ ಎಂದು ಅರಣ್ಯಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.