23 ವರ್ಷಗಳ ಹಿಂದೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರನ್ನು ಪ್ಯಾರಾಗ್ಲೈಡಿಂಗ್‌ನಲ್ಲಿ ಕರೆದುಕೊಂಡು ಹೋಗಿದ್ದ ಪೈಲಟ್ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇಲ್ಲಿನ ಸೊಲಾಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಇನ್‌ಸ್ಟ್ರಕ್ಟರ್ ಆಗಿ ಕೆಲಸ ಮಾಡುವ ಬುಧಿ ಪ್ರಕಾಶ್, 1997ರಲ್ಲಿ ಈಗ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರನ್ನು ಪ್ಯಾರಾಗ್ಲೈಡಿಂಗ್ ಕರೆದೊಯ್ದುದ್ದರು. ಆ ಸಮಯದಲ್ಲಿ ಹಿಮಾಚಲ ಪ್ರದೇಶ ಬಿಜೆಪಿಯ ಚುಕ್ಕಾಣಿಯನ್ನು ಮೋದಿಯವರಿಗೆ ವಹಿಸಲಾಗಿತ್ತು.
“ಬಹಳ ಗಟ್ಟಿಮುಟ್ಟಾಗಿದ್ದ ಮೋದಿಜೀ ತಮ್ಮ ಮೊದಲ ಪ್ಯಾರಾಗ್ಲೈಡಿಂಗ್ ವೇಳೆ ಬಹಳ ಡೇರಿಂಗ್ ಆಗಿದ್ದರು” ಎಂದಿದ್ದಾರೆ ಪ್ರಕಾಶ್. ಆ ಸಮಯದಲ್ಲಿ ಸೊಲಾಂಗ್ ಕಣಿವೆಯಲ್ಲಿ ರೋಪ್‌ವೇ ಇರಲಿಲ್ಲ ಎಂದು ಪ್ರಕಾಶ್ ನೆನೆಯುತ್ತಾರೆ.
“ಪ್ಯಾರಾಗ್ಲೈಡಿಂಗ್ ಟೇಕಾಫ್ ಆಗುವ ಜಾಗ ತಲುಪಲು ಶಿಖರವನ್ನು ಏರಬೇಕಾಗಿತ್ತು. ಸಾಮಾನ್ಯವಾಗಿ, ಗುಡ್ಡ ಮೇಲೆ ಏರುವ ಹೊತ್ತಿಗೆ ಪ್ರವಾಸಿಗರಿಗೆ ಸಾಕುಸಾಕಾಗಿ ಹೋಗುತ್ತಿತ್ತು. ಆದರೆ ಮೋದಿಜೀ ಆ ಸ್ಪಾಟ್ ತಲುಪಲು ಸ್ವಲ್ಪವೂ ಸಹ ದಣಿಯಲಿಲ್ಲ” ಎನ್ನುತ್ತಾರೆ ಪ್ರಕಾಶ್.
“ಸಾಮಾನ್ಯವಾಗಿ ಮೊದಲ ಬಾರಿಗೆ ಪ್ಯಾರಾಗ್ಲೈಡಿಂಗ್ ಮಾಡುವ ಜನರಿಗೆ ಬಹಳ ಭಯವಿರುತ್ತದೆ. ಆದರೆ ಮೋದಿಜೀಗೆ ಸ್ವಲ್ಪವೂ ಭಯವಿರಲಿಲ್ಲ, ಅಲ್ಲದೇ ಅವರಿಗೆ ಇನ್ನೊಂದು ಬಾರಿ, ಇನ್ನಷ್ಟು ದೂರ ಇದೇ ಪ್ಯಾರಾಗ್ಲೈಡಿಂಗ್ ಮಾಡಬೇಕು ಅನಿಸುತ್ತಿತ್ತು. ಮತ್ತೊಮ್ಮೆ ಬಿಡುವು ಸಿಕ್ಕಾಗ ಇನ್ನೊಂದು ದಿನ ಬರುವುದಾಗಿ ಮೋದಿ ಆ ಕೂಡಲೇ ಹೇಳಿದ್ದರು” ಎಂದ ಪ್ರಕಾಶ್, “ಅವರು ಮೊದಲ ಬಾರಿಗೆ ಪ್ಯಾರಾಗ್ಲೈಡಿಂಗ್ ಮಾಡಿದಾಗ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಈಗ ಅವರು ಪ್ರಧಾನ ಮಂತ್ರಿಯಾಗಿದ್ದಾರೆ. ಅವರೊಂದಿಗೆ ಫ್ಲೈಯಿಂಗ್ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆ ಎನಿಸುತ್ತಿದೆ” ಎಂದಿದ್ದಾರೆ.