ನವರಾತ್ರಿ ಹಬ್ಬದ ವೇಳೆ 30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರಿಗೆ ಬೋನಸ್ ಘೋಷಣೆ ಮಾಡಿರುವ ನರೇಂದ್ರ ಮೋದಿ ಸರ್ಕಾರ ಇದಕ್ಕೆಂದೇ 3,737 ಕೋಟಿ ರೂ.ಗಳನ್ನು ವ್ಯಯಿಸಲಿದೆ.
ವಿತ್ತೀಯ ವರ್ಷ 2019-20ಕ್ಕೆ ಅನ್ವಯವಾಗುವಂತೆ 78 ದಿನಗಳ ವೇತನದಷ್ಟು ಹಣವನ್ನು 11.58 ಲಕ್ಷ ನಾನ್-ಗೆಝೆಟೆಡ್ ರೈಲ್ವೇ ಉದ್ಯೋಗಿಗಳಿಗೆ ಕೊಡಮಾಡಲಾಗಿದೆ. ಉತ್ಪಾದನೆ ಸಂಬಂಧಿತ ಬೋನಸ್ (PLB) ರೂಪದಲ್ಲಿ ರೈಲ್ವೇ ಉದ್ಯೋಗಿಗಳಿಗೆ ನೀಡಲಾಗುವ ಹಣವೇ ಒಟ್ಟು 2,082 ಕೋಟಿ ರೂ.ಗಳಷ್ಟಿದೆ ಎನ್ನಲಾಗಿದೆ.
ಈ ಸಂಬಂಧ ರೈಲ್ವೇ ಸಚಿವಾಲಯ ಮುಂದಿಟ್ಟ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದೆ. ಇದರ ಅನ್ವಯ, ಅರ್ಹ ನಾನ್-ಗೆಝೆಟೆಡ್ ರೈಲ್ವೇ ಉದ್ಯೋಗಿಯೊಬ್ಬರಿಗೆ ತಿಂಗಳಿಗೆ 7,000 ರೂ.ಗಳಂತೆ, ಗರಿಷ್ಠ 17,951 ರೂ.ಗಳವರೆಗೂ ಬೋನಸ್ ಕೊಡಬಹುದಾಗಿದೆ. ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ PLBಯನ್ನು ರೈಲ್ವೇ ಉದ್ಯೋಗಿಗಳಿಗೆ ಕೊಡುತ್ತಾ ಬರಲಾಗಿದೆ.
ಕೋವಿಡ್ ಸಾಂಕ್ರಮಿಕದ ನಡುವೆಯೇ ಕೆಲಸ ಮಾಡುತ್ತಲೇ ಇರುವ ರೈಲ್ವೇ ಸಿಬ್ಬಂದಿ ಅತ್ಯಗತ್ಯ ವಸ್ತುಗಳ ಸಾಗಾಟದಲ್ಲಿ ಮಹತ್ವದ ತಮ್ಮ ಪಾತ್ರವನ್ನು ಎಗ್ಗಿಲ್ಲದೇ ಮುಂದುವರೆಸುತ್ತಿರುವ ಕಾರಣ ದೇಶದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಬ್ಧವಾಗದೇ ಉಳಿದಿವೆ. ಇದೇ ವೇಳೆ 200ಕ್ಕೂ ಹೆಚ್ಚು ನಿರ್ವಹಣಾ ಸಂಬಂಧಿ ಕಾರ್ಯಗಳನ್ನು ರೈಲ್ವೇ ಇಲಾಖೆ ಪೂರೈಸಿದೆ.