ಮಾಧ್ಯಮಗಳಲ್ಲಿ ಅದರಲ್ಲೂ ವಿಶೇಷವಾಗಿ ಜಾಗತಿಕ ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಹೆಚ್ಚಾಗಿ ವ್ಯಕ್ತ ವಾಗ್ತಿರೋದನ್ನ ಮನಗಂಡ ನರೇಂದ್ರ ಮೋದಿ ಸರ್ಕಾರ ಇದೀಗ ಮಾಧ್ಯಮಗಳನ್ನ ನಿಯಂತ್ರಿಸೋಕೆ ಹೊಸ ಕಾರ್ಯತಂತ್ರವೊಂದನ್ನ ಹೆಣೆದಿದೆ.
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಹಿರಿಯ ಅಧಿಕಾರಿಗಳ ತಂಡ ಆರ್ಟಿಐನಿಂದ ಬಂದ ಎಲ್ಲಾ ಅರ್ಜಿಗಳಿಗೆ ವಿವರಣಾತ್ಮಕ ವ್ಯಾಖ್ಯಾನ ನೀಡಲಿದೆ. ಲಾಕ್ಡೌನ್ ಬಗ್ಗೆ ವಿವರಣೆ ಕೇಳಿ ಈಗಾಗಲೇ 240 ಆರ್ಟಿಐ ಅರ್ಜಿಗಳು ಸಲ್ಲಿಕೆಯಾಗಿವೆ. ಲಾಕ್ಡೌನ್ ಮಾಡುವ ಮುನ್ನ ಕೇಂದ್ರ ಸರ್ಕಾರ ಸಂಬಂಧಪಟ್ಟ ಇಲಾಖೆ ಹಾಗೂ ತಜ್ಞರ ಬಳಿ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದೀಗ ಈ ಎಲ್ಲಾ ಅರ್ಜಿಗಳಿಗೆ ಹಿರಿಯ ಅಧಿಕಾರಿಗಳು ಸೂಕ್ತ ಉತ್ತರ ನೀಡಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ 9 ಮಂದಿ ಸಚಿವರ ಗುಂಪು ಮಾಧ್ಯಮ ನಿರ್ವಹಣೆ ಕುರಿತಂತೆ ವರದಿಯೊಂದನ್ನ ತಯಾರಿಸಿತ್ತು. ಇದರ ಮುಂದುವರಿದ ಭಾಗವಾಗಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ಪೂರ್ವಭಾವಿ ಕ್ರಮಗಳನ್ನ ಕೈಗೊಳ್ಳಲು ಸೂಚನೆ ನೀಡಿದೆ.
ಆರ್ಟಿಐ ಅರ್ಜಿಗಳಿಗೆ ಉತ್ತರಿಸುವಾಗ ಎಚ್ಚರದಿಂದ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವರು ಬೇಕಂತಲೆ ಸರ್ಕಾರಕ್ಕೆ ಭಂಗ ತರುವಂತಹ ಅರ್ಜಿಗಳನ್ನ ಸಲ್ಲಿಸೋ ಸಾಧ್ಯತೆಯೂ ಇರೋದ್ರಿಂದ ಇಂತಹ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಎಂದು ಎಲ್ಲಾ ಸಚಿವರು ಹಾಗೂ ಇಲಾಖೆಗೆ ಸೂಚನೆ ನೀಡಲಾಗಿದೆ.
ಕೆಲವೊಂದು ಸುಳ್ಳು ವರದಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಕೇಂದ್ರ ಸರ್ಕಾರದ ಮೇಲೆ ಅಪಖ್ಯಾತಿ ಹೆಚ್ಚುತ್ತಿದೆ. ಹೀಗಾಗಿ ಈ ತಂಡದ ಸಹಾಯದಿಂದ ಸರ್ಕಾರದ ನಿಲುವನ್ನ ಜಾಗತಿಕ ಮಟ್ಟದಲ್ಲಿ ಉತ್ತಮ ಮಾಡಬೇಕಾದ ಜವಾಬ್ದಾರಿ ಇದೆ ಎಂದು ಹೇಳಲಾಗಿದೆ.
ಇನ್ನು ಸಚಿವರು ನೀಡಿದ ವರದಿಯಲ್ಲಿ ಕೆಲಸವನ್ನ ಕಳೆದುಕೊಂಡಿರುವ ಆದರೆ ಮೋದಿ ಸರ್ಕಾರದ ಬಗ್ಗೆ ಬೆಂಬಲ ಅಥವಾ ತಟಸ್ಥ ಭಾವನೆಯನ್ನ ಹೊಂದಿರುವ ಪತ್ರಕರ್ತರನ್ನ ಸರ್ಕಾರದ ಪರ ಕೆಲಸಮಾಡುವಂತೆ ಪ್ರೇರೇಪಿಸಬೇಕು. ಇವರ ಸಹಾಯದಿಂದಲೂ ಸರ್ಕಾರದ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತೆ ಎಂದು ಹೇಳಿದೆ.
ಜಾಗತಿಕ ಮಟ್ಟದಲ್ಲೂ ಸರ್ಕಾರದ ಹೆಸರು ಹಾಳಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಜಾಗತಿಕ ಪತ್ರಕರ್ತರ ಜೊತೆಯೂ ಒಳ್ಳೆಯ ಸಂಬಂಧ ಕಾಪಾಡಿಕೊಳ್ಳುವಂತೆ ಈ ವರದಿ ಹೇಳಿದೆ.