ತನ್ನ ಮಾಹಿತಿ ಹಾಗೂ ಖಾಸಗಿ ಮಾಹಿತಿ ಸುರಕ್ಷತೆಗೆ ನೀತಿ ಕುರಿತಂತೆ ಭಾರೀ ಚರ್ಚೆಗೆ ಒಳಗಾಗಿರುವ ವಾಟ್ಸಾಪ್ ಇದೀಗ ಮತ್ತೊಂದು ಆಪಾದನೆ ಎದುರಿಸುತ್ತಿದೆ. ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಬಳಸಿದ ಮಂದಿಯ ದೂರವಾಣಿ ಸಂಖ್ಯೆಗಳು ಗೂಗಲ್ ಸರ್ಚ್ ಮೂಲಕ ಬಹಿರಂಗವಾಗುತ್ತಿವೆ ಎಂದು ವರದಿಯಾಗಿದೆ.
ಬಹುತೇಕ ಮೊಬೈಲ್ ಕಿರುತಂತ್ರಾಂಶದ ರೂಪದಲ್ಲಿ ಬಳಸಲಾಗುವ ವಾಟ್ಸಾಪ್‌ಗೆ ಭಾರತದಲ್ಲೇ 40 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ. ನೌಕರಿಯಲ್ಲಿರುವ ಕೆಲವು ಮಂದಿ ವಾಟ್ಸಾಪ್ ನ ವೆಬ್ ವರ್ಶನ್ ಅನ್ನು ತಮ್ಮ ಪಿಸಿಗಳಲ್ಲೂ ಬಳಸುತ್ತಾರೆ.
ಸೈಬರ್ ಭದ್ರತೆಯ ಸ್ವತಂತ್ರ ಸಂಶೋಧಕ ರಾಜಶೇಖರ್ ರಾಜಹರಿಯಾ ಈ ಸಂಬಂಧ ಕೆಲ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ವೆಬ್ ವರ್ಶನ್‌ನ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಗೂಗಲ್ ಸರ್ಚ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಈ ಸ್ಕ್ರೀನ್‌ಶಾಟ್‌ಗಳಲ್ಲಿ ನೋಡಬಹುದಾಗಿದೆ.
ಇದಕ್ಕೂ ಮುನ್ನ ವಾಟ್ಸಾಪ್ ಗ್ರೂಪ್ ಚಾಟ್‌ಗಳ ಲಿಂಕ್‌ಗಳು ಗೂಗಲ್ ಸರ್ಚ್‌ನಲ್ಲಿ ಲಭ್ಯವಿರುವುದು ಕಂಡುಬಂದ ಬಳಿಕ ಗ್ರೂಪ್ ಚಾಟ್ ಲಿಂಕ್‌ಗಳನ್ನು ಸಾರ್ವಜನಿಕವಾಗಿ ಬಳಕೆ ಮಾಡುವ ತಾಣಗಳಲ್ಲಿ ಶೇರ್ ಮಾಡದಂತೆ ತನ್ನ ಬಳಕೆದಾರರಿಗೆ ವಾಟ್ಸಾಪ್ ಸೂಚಿಸಿತ್ತು. ಇಂಥ ಲಿಂಕ್‌ಗಳನ್ನು ಬಳಸುವ ಮೂಲಕ ವಾಟ್ಸಾಪ್‌ನ ಖಾಸಗಿ ಗ್ರೂಪ್‌ಗಳಿಗೆ ಯಾರು ಬೇಕಾದರೂ ಸೇರಿಕೊಳ್ಳಬಹುದಾಗಿತ್ತು.
ಫೆಬ್ರವರಿ 8ರಿಂದ ಆಚೆಗೆ ಅನ್ವಯವಾಗುವಂತೆ ತನ್ನ ಬಳಕೆದಾರರಿಗೆ ಹೊಸ ಖಾಸಗಿ ನೀತಿಯನ್ನು ಹೊರತರುತ್ತಿರುವ ವಾಟ್ಸಾಪ್, ಅದಕ್ಕೆ ಒಪ್ಪಿದವರಿಗೆ ಮಾತ್ರವೇ ತನ್ನ ಸೇವೆಗಳನ್ನು ಬಳಸಲು ಅನುಮತಿ ಕೊಡುವುದಾಗಿ ತಿಳಿಸಿತ್ತು. ವಾಟ್ಸಾಪ್‌ನ ಈ ನಡೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಜನವರಿ 18ರಂದು ಮುಂದಿನ ಆಲಿಕೆ ಇದೆ.