ಪ್ರಸವ ವೇದನೆ ಅನುಭವಿಸುತ್ತಿದ್ದ ಗರ್ಭಿಣಿಗೆ ಶಾಸಕರು ಶಸ್ತ್ರ ಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. ಇತ್ತೀಚೆಗೆ ಭೂಕಂಪದಿಂದ ಹಾನಿಗೊಳಗಾದ ಚಂಫೈ ಜಿಲ್ಲೆಯ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ಮಿಜೋರಾಮ್ ನ ಎಂಎನ್ಎಫ್ ಶಾಸಕ ಥಿಯಾಮ್ಸಂಗ, ಹೆರಿಗೆ ಮಾಡಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪರಿಶೀಲನೆಗೆ ತೆರಳಿದ ವೇಳೆ ಲಾಲ್ಹಮಂಗೈಸಂಗಿ (38) ಪ್ರಸವ ವೇದನೆಯಿಂದ ಬಳಲುತ್ತಿದ್ದರು. ಸ್ಥಳಕ್ಕೆ ಬಂದ ಶಾಸಕರು, ಸ್ಥಳೀಯ ಆಸ್ಪತ್ರೆಗೆ ಕರೆತಂದರು. ಆದರೆ, ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣದಿಂದ ರಜೆ ಮೇಲೆ ತೆರಳಿದ್ದರು.
ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುವ ಸ್ಥಿತಿಯಲ್ಲಿ ಗರ್ಭಿಣಿ ಇರಲಿಲ್ಲ. ಹೀಗಾಗಿ ವೈದ್ಯರೂ, ಪ್ರಸೂತಿ ತಜ್ಞರೂ ಆಗಿರುವ ಶಾಸಕ ಥಿಯಾಮ್ಸಂಗ, ತಾವೇ ಸ್ತೆಥಾಸ್ಕೋಪ್ ಧರಿಸಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದರು.