ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಲೇ ಇದೆ. 10 ತಿಂಗಳಿಂದ ಮಾರಣಾಂತಿಕ ಖಾಯಿಲೆ ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಭಾರತದಲ್ಲಿ ಸದ್ಯ ಕೊರೊನಾದಿಂದ ಚೇತರಿಸಿಕೊಳ್ತಿರುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಕೊರೊನಾ ಹಾವಳಿ ಕಡಿಮೆಯಾಗಿಲ್ಲ. ಹಾಗೆ ಲಸಿಕೆ ಬಂದಿಲ್ಲ. ಹಾಗಾಗಿ ನಿರ್ಲಕ್ಷ್ಯ ಬೇಡವೆಂದು ಸರ್ಕಾರ ಹೇಳಿದೆ. ಈ ಮಧ್ಯೆ ಆಯುಷ್ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಆಯುಷ್ ಸಚಿವ ಶ್ರೀಪಾದ್ ಯಾಶೋ ನಾಯಕ್ ಅವರು ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಕೊರೊನಾ ನಿಯಂತ್ರಿಸಲು ನೆರವಾಗಲಿದೆ ಎಂದಿದ್ದಾರೆ.
ಆಯುಷ್ ಸಚಿವಾಲಯದ ಮಾರ್ಗಸೂಚಿ:
ದಿನವಿಡೀ ಬಿಸಿ ನೀರನ್ನು ಕುಡಿಯಬೇಕು. ಬಿಸಿಯಾದ, ತಾಜಾ ಬೇಯಿಸಿದ ಆಹಾರವನ್ನು ಸೇವಿಸಬೇಕು.
ಕನಿಷ್ಠ 30 ನಿಮಿಷಗಳ ಕಾಲ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬೇಕು.
ಅಡುಗೆ ಮಾಡುವಾಗ ಅರಿಶಿನ, ಜೀರಿಗೆ ಮತ್ತು ಕೊತ್ತಂಬರಿ ಮುಂತಾದ ಮಸಾಲೆ ಪದಾರ್ಥಗಳನ್ನು ಬಳಸಬೇಕು.
ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಚಿವಾಲಯವು ಬೆಳಿಗ್ಗೆ 1 ಟೀ ಚಮಚ ಚ್ಯವನ್ಪ್ರಶ್ ತಿನ್ನಲು ಸೂಚಿಸಿದೆ.
ಮಧುಮೇಹ ರೋಗಿಗಳು ಸಕ್ಕರೆ ಇಲ್ಲದೆ ಚ್ಯವನ್ಪ್ರಶ್ ತಿನ್ನಬೇಕು.
ಗಿಡಮೂಲಿಕೆ ಚಹಾವನ್ನು ದಿನಕ್ಕೆ 1 ಅಥವಾ 2 ಬಾರಿ ಕುಡಿಯಬೇಕು. ತುಳಸಿ, ದಾಲ್ಚಿನ್ನಿ, ಕರಿಮೆಣಸು, ಒಣ ಶುಂಠಿ ಮತ್ತು ಒಣದ್ರಾಕ್ಷಿ ಕಷಾಯವನ್ನು ತೆಗೆದುಕೊಳ್ಳಬಹುದು.
150 ಮಿಲಿ ಬೆಚ್ಚಗಿನ ಹಾಲಿನಲ್ಲಿ ಅರ್ಧ ಟೀ ಚಮಚ ಅರಿಶಿನವನ್ನು ಸೇರಿಸಿ ಕುಡಿಯಬೇಕು.
ಮೂಗಿನ ಹೊಳ್ಳೆಗಳಿಗೆ ಬೆಳಿಗ್ಗೆ ಮತ್ತು ಸಂಜೆ ಎಳ್ಳು ಅಥವಾ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಬೇಕು.
ಒಣ ಕೆಮ್ಮು ಕಾಡುತ್ತಿದ್ದರೆ ದಿನಕ್ಕೆ ಒಮ್ಮೆ ತಾಜಾ ಪುದೀನ ಎಲೆಗಳ ನೀರಿನ ಸ್ಟೀಮ್ ತೆಗೆದುಕೊಳ್ಳಬೇಕು. ಕೆಮ್ಮು ಅಥವಾ ಗಂಟಲು ನೋವಿದ್ದರೆ ಲವಂಗ ಪುಡಿಯನ್ನು ನೈಸರ್ಗಿಕ ಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ದಿನಕ್ಕೆ 2-3 ಬಾರಿ ತೆಗೆದುಕೊಳ್ಳುವುದು ಸೂಕ್ತ.
ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು ಪ್ರತಿದಿನ ಚ್ಯವನ್ಪ್ರಶ್ ತಿನ್ನಬೇಕು. ರೋಗಲಕ್ಷಣಗಳಿಲ್ಲದ ರೋಗಿಗಳು ಅಥವಾ ಕೊರೊನದ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಅಶ್ವಗಂಧವನ್ನು ನಿಯಮಿತವಾಗಿ ಸೇವಿಸಿದರೆ ಪ್ರಯೋಜನವಾಗುತ್ತದೆ.