ಕಾಸರಗೋಡು: ಇಪ್ಪತ್ತು ವರ್ಷಗಳ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕೇರಳದ ಮಹಿಳೆ ಕಳೆದುಕೊಂಡಿದ್ದ ಕಿವಿಯೋಲೆ ಇತ್ತೀಚೆಗೆ ಕೆಲಸಗಾರರಿಗೆ ಸಿಕ್ಕಿ ಅಚ್ಚರಿಗೆ ಕಾರಣವಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬೆಡಕ ಪಂಚಾಯಿತಿ ವ್ಯಾಪ್ತಿಯ ಮಹಿಳೆ ನಾರಾಯಣಿ ಎಂಬಾಕೆ 2000 ನೇ ಇಸವಿಯಲ್ಲಿ ಗದ್ದೆಯಲ್ಲಿ ಕೆಲಸ ಮಾಡುವಾಗ ತನ್ನ ಎರಡೂ ಕಿವಿಯೋಲೆಗಳನ್ನು ಕಳೆದುಕೊಂಡಿದ್ದರು.
ಆಕೆ ಅದನ್ನು 24 ಕಿಲೋ ಭತ್ತ ಮಾರಾಟ ಮಾಡಿ ದಶಕಗಳ ಹಿಂದೆ ಕೊಂಡುಕೊಂಡಿದ್ದಾಗಿತ್ತು. ಸಾಕಷ್ಟು ಹುಡುಕಿದರೂ ಆಭರಣ ಸಿಗದ ಕಾರಣ ಅದರ ಆಸೆ ಬಿಟ್ಟಿದ್ದರು.
ಅದೇ ಗದ್ದೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ಮಹಿಳೆಯರು ಇತ್ತೀಚೆಗೆ ಕೆಲಸ ಮಾಡುತ್ತಿದ್ದರು. ಅದರಲ್ಲಿ ಬೇಬಿ ಎಂಬ ಮಹಿಳೆಗೆ ಕಿವಿಯೋಲೆ ಸಿಕ್ಕಿದೆ. ಬೇಬಿ ಸುಭಿಕ್ಷಾ ಕೇರಳಂ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದರು. ಆಕೆಯ ಜತೆಗೇ ಇದ್ದ ನಾರಾಯಣಿ ಅವರ ಮಗಳು ಇದು ತನ್ನ ತಾಯಿಯ ಓಲೆಗಳು ಎಂದು ಗುರುತಿಸಿದ್ದಾಳೆ.