ಮುಂಬೈ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಡೊಮ್ ಗಳಂತಹ ಗರ್ಭ ನಿರೋಧಕಗಳನ್ನು ಹೆಚ್ಚಾಗಿ ಬಳಸುವುದರೊಂದಿಗೆ ಪುರುಷರು ಜನನ ನಿಯಂತ್ರಣದ ಜವಾಬ್ದಾರಿಯನ್ನು ಹೆಚ್ಚಾಗಿ ನಿರ್ವಹಿಸಲು ಆರಂಭಿಸಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆNFHS) ದತ್ತಾಂಶ ತಿಳಿಸಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಮಹಿಳೆಯರ ಗರ್ಭ ನಿರೋಧಕ ಮಾತ್ರೆ ಬಳಕೆಯಲ್ಲಿ ಕುಸಿತ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ ಕಾಂಡೊಮ್ ಬಳಕೆ ಶೇಕಡ 7.1 ರಿಂದ ಶೇಕಡ 10.2 ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ನಗರ ಪ್ರದೇಶದಲ್ಲಿ ಏರಿಕೆ ಹೆಚ್ಚು ಕಂಡುಬಂದಿದೆ. ಅದೇ ಸಮಯದಲ್ಲಿ ಮಹಿಳೆಯರಲ್ಲಿ ಗರ್ಭ ನಿರೋಧಕ ಮಾತ್ರೆಗಳ ಬಳಕೆ ಶೇಕಡ 1.8 ರಷ್ಟು ಕುಸಿತವಾಗಿದೆ. ಕುಟುಂಬ ಯೋಜನೆ ವಿಷಯದಲ್ಲಿ ಪುರುಷರು ಹೆಚ್ಚಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಬದಲಾವಣೆಯನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.
ಮುಂಬೈ ಮಹಾನಗರದಲ್ಲಿ ಪ್ರತಿ 10 ವಿವಾಹಿತ ದಂಪತಿಗಳಲ್ಲಿ 7 ಮಂದಿ ಕುಟುಂಬ ಯೋಜನೆಗೆ ಒಲವು ತೋರುತ್ತಿದ್ದಾರೆ. 2015 -16 ರಲ್ಲಿ ಇವರ ಶೇಕಡಾವಾರು ಪ್ರಮಾಣ 59.6 ರಷ್ಟು ಇತ್ತು. 2019 – 20 ರಲ್ಲಿ ಶೇಕಡ 74.3 ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ಕಾಂಡೋಮ್ ಗಳ ಬಳಕೆ ಶೇಕಡ 11.7 ರಿಂದ ಶೇಕಡ 18 ಕ್ಕೆ ಏರಿಕೆಯಾಗಿದೆ. ಮಹಿಳೆಯರ ಗರ್ಭನಿರೋಧಕ ಬಳಕೆ ಶೇಕಡ 47 ರಿಂದ ಶೇಕಡ 36.1 ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗಿದೆ.