ಜಮ್ಮು: ಜಮ್ಮು- ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮಫ್ತಿ ಅವರು ಪೀಠೋಪಕರಣ, ಟಿವಿ ಮತ್ತು ಹೊದಿಕೆಗಾಗಿ ಮಾಡಿರುವ ಖರ್ಚು ಎಷ್ಟು ಗೊತ್ತೆ ? ಅದೂ 6 ತಿಂಗಳಲ್ಲಿ ? ಒಂದಲ್ಲಾ ಎರಡಲ್ಲಾ, ಬರೋಬ್ಬರಿ 82 ಲಕ್ಷ ರುಪಾಯಿ.
2018 ರ ಜನವರಿಯಿಂದ ಜೂನ್ ವರೆಗೆ ಈ ಪ್ರಮಾಣದ ಹಣ ಖರ್ಚಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯಿಂದ ಈ ಅಂಶ ಬೆಳಕಿಗೆ ಬಂದಿದೆ.
ಕಾಶ್ಮೀರದ ಕಾರ್ಯಕರ್ತ ಇನಾಮ್ ಉನ್ ನಬಿ ಸೌದಾಗರ್ ಎಂಬುವರು ಆರ್ ಟಿ ಐ ಅಡಿ ಅರ್ಜಿ ಸಲ್ಲಿಸಿದ್ದು, ಶ್ರೀನಗರದಲ್ಲಿನ ಮಫ್ತಿ ನಿವಾಸ ಮತ್ತು ಕಚೇರಿಗಾಗಿ ಇಷ್ಟೆಲ್ಲ ಖರ್ಚಾಗಿದೆಯಲ್ಲದೆ, ಇಷ್ಟೂ ಹಣವನ್ನು ಕೇಂದ್ರ ಸರ್ಕಾರ ಭರಿಸಿದೆ.
2018 ರ ಮಾರ್ಚ್ 28 ರಂದು ಕಾರ್ಪೆಟ್ ಖರೀದಿಗೆ 28 ಲಕ್ಷ ರೂ., ಜೂನ್ ತಿಂಗಳಲ್ಲಿ ಎಲ್ಇಡಿ ಟಿವಿಗೆ 22 ಲಕ್ಷ ರೂ., ಪೀಠೋಪಕರಣ ಸೇರಿದಂತೆ ಇನ್ನಿತರ ವಸ್ತುಗಳಿಗಾಗಿ 25 ಲಕ್ಷ ರೂ.ಗೂ ಅಧಿಕ ಮೊತ್ತ ಖರ್ಚಾಗಿದೆ. ಅಲ್ಲದೆ, ಕೈತೋಟಕ್ಕೆ 2.94 ಲಕ್ಷ ರೂ. ಮೌಲ್ಯದ ಛತ್ರಿ, 11.62 ಲಕ್ಷ ರೂ. ಬೆಲೆಬಾಳುವ ಹೊದಿಕೆ ಖರೀದಿಸಲಾಗಿದೆ.