ಅಂದು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಹೋರಾಟಗಳು ಇಂದು ಧರ್ಮಕ್ಕಾಗಿ ನಮ್ಮ-ನಮ್ಮಲ್ಲೇ ನಡೆಯುತ್ತಿದೆ ಎಂದು ಸಿಂಧಿ ಕವಯಿತ್ರಿ ದಯಾಲಕ್ಷ್ಮೀ ಜಷ್ನಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನೀಡಿರುವ ಸಂದರ್ಶನದಲ್ಲಿ ಸ್ವಾತಂತ್ರ್ಯೋತ್ತರ ಭಾರತ ಹಾಗೂ ಸ್ವಾತಂತ್ರ್ಯಾನಂತರ ಭಾರತದ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ.
ಪಂಜಾಬ್ ನ ಸಿಂಧ್ ಪ್ರಾಂತ್ಯ ಮೂಲದವಳಾದ ನನಗೀಗ 84 ವರ್ಷ. 4 ವರ್ಷದವಳಿದ್ದಾಗ ಜೇನುಹುಳ ಕಚ್ಚಿದ್ದಕ್ಕೆ ಗೆಳೆಯ ಹಮೀದ್ ಕಣ್ಣೀರಿಟ್ಟಿದ್ದ, ಅಮ್ಮನ ಹತ್ತಿರ ಕರೆ ತಂದು ಔಷಧಿ ಮಾಡಿಸಿದ್ದ. ಮುಸಲ್ಮಾನರ ಮನೆಯಲ್ಲೇ ಬೆಳೆದವಳು ನಾನು.
ಬ್ರಿಟಿಷರಿಂದ ಭಾರತ ಸ್ವತಂತ್ರ ಆಗಬೇಕೆಂಬ ಏಕಮೇವ ಧ್ಯೇಯದೊಂದಿಗೆ ಅಂದು ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಭಾರತ-ಪಾಕಿಸ್ತಾನ ಬೇರ್ಪಟ್ಟ ಬಳಿಕ, ಹಿಂಸಾಚಾರಗಳು ನಡೆದು ಹೋದವು. ನಾವಿದ್ದ ಮನೆ ಪಾಕಿಸ್ತಾನ ಸೇರಿ ಹೋಯಿತು. ಕೋಮು ಗಲಭೆ ಹೆಚ್ಚಾದವು. ರಕ್ತದ ಕೋಡಿ ಹರಿಯಿತು. ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಬಂದುಬಿಟ್ಟೆವು.
ಸಿಂಧ್ ನಲ್ಲಿ ನಾವಿದ್ದ ಮನೆ ಇಂದು ಪಾಕಿಸ್ತಾನಕ್ಕೆ ಸೇರಿದೆಯಾದರೂ, ಮನಸ್ಸು ಮಾತ್ರ ಭಾರತದಲ್ಲೇ ಇದೆ. ಇಂದಿಗೂ ಹಮೀದ್ ನೆನಪು ಕಾಡುತ್ತದೆ. ಸ್ವತಂತ್ರ ಭಾರತಕ್ಕಾಗಿ ನಡೆಯುತ್ತಿದ್ದ ಹೋರಾಟಗಳು ಇಂದು ಧರ್ಮದ ಹೆಸರಿನಲ್ಲಿ ಹಿಂಸೆಗೆ ತಿರುಗುವುದನ್ನು ನೋಡಲಾಗುವುದಿಲ್ಲ ಎಂದು ನೊಂದು ನುಡಿದಿದ್ದಾರೆ.
ಅದೇನೆ ಇರಲಿ, ಸಿಂಧಿ ಭಾಷೆಯಲ್ಲಿ ಬರೆಯುವ ನನ್ನ ಕವನಗಳಿಗೆ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆ ಅಭಿಮಾನಿಗಳಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ. ನಾವು ಸಿಂಧಿಗಳು, ಇರುವಲ್ಲಿಗೆ ಅಡ್ಜೆಸ್ಟ್ ಆಗುತ್ತೇವೆ. ಚಂದ್ರಗ್ರಹಕ್ಕೆ ಮನುಷ್ಯರು ಹೋದರೆ, ಅಲ್ಲಿ ಮೊದಲ ಅಂಗಡಿ ಸಿಂಧಿಯರದ್ದೇ ಇರುತ್ತದೆ ಎಂದು ಹಾಸ್ಯ ಮಾಡಿದ್ದಾರೆ.