ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇದೇ ಸೆಪ್ಟೆಂಬರ್‌ನಲ್ಲಿ ಆಯೋಜನೆ ಮಾಡಿಕೊಳ್ಳಲಾದ ಟುಂಝಾ ಈಕೋ-ಜನರೇಷನ್ ಕಾರ್ಯಕ್ರಮದಲ್ಲಿ ಖುಷಿ ಚಿಂಡಾಲಿಯಾ ಭಾಗಿಯಾಗಲಿದ್ದಾರೆ. ಈ ಸಮಾರಂಭದ ವೇಳೆ ಪರ್ಯಾವರಣ ಸಂರಕ್ಷಣೆಗೆ ಭಾರತದ ಕೊಡುಗೆಗಳ ಕುರಿತು ಚಿಂಡಾಲಿಯಾ ಮಾತನಾಡಲಿದ್ದಾರೆ.
ತನ್ನ ಎದುರೇ ತನ್ನೂರಿನ ಹಸಿರೆಲ್ಲಾ ಮಾಯವಾಗುತ್ತಿರುವುದನ್ನು ಕಂಡು ಬೇಸರಗೊಂಡ ಖುಷಿ, ತನ್ನ ಹೊಸ ಮನೆಯ ಸುತ್ತ ಇದ್ದ ಮರಗಳೆಲ್ಲಾ ಒಂದೊಂದಾಗಿ ನೆಲಸಮಗೊಂಡು, ಅಲ್ಲಿದ್ದ ಪಕ್ಷಿಗಳೆಲ್ಲಾ ಕಾಣೆಯಾಗಿದ್ದು ಮನಸ್ಸಿಗೆ ನೋವುಂಟು ಮಾಡಿದ್ದಾಗಿ ತಿಳಿಸಿದ್ದಾರೆ. ತನ್ನ ಕಿರಿಯ ಸಹೋದರರಿಗೆ ತನ್ನಂತೆ ಪ್ರಕೃತಿಯ ಆರೈಕೆ ಸಿಗದೇ ಹೋಗುವ ಆತಂಕದಿಂದ ತನ್ನ ಈ ಪರ್ಯಾವರಣ ಜಾಗೃತಿ ಅಭಿಯಾನ ಆರಂಭಿಸಿದ್ದಾಗಿ ಹೇಳುತ್ತಾರೆ ಖುಷಿ ಚಂಡಾಲಿಯಾ.
ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಥೆ ಹವಾಮಾನ ಕ್ರಿಯಾ ಸಮಿತಿಯ ಸಭೆಯ ವೇಳೆ ಉತ್ತರಾಖಂಡದ 11 ವರ್ಷದ ಬಾಲಕಿ ರಿಧಿಮಾ ಪಾಂಡೆ ಭಾಗಿಯಾಗಿದ್ದಳು.
ಇದೇ ವೇಳೆ ಮಣಿಪುರದ ಲಿಸಿಪ್ರಿಯಾ ಕಂಗುಜಾಮ್ ಹವಾಮಾನ ಬದಲಾವಣೆ ಸಂಬಂಧ ಅಭಿಯಾನದ ರಾಯಭಾರಿಯಾಗಿರುವ ಭಾರತದ ಅತ್ಯಂತ ಕಿರಿಯ ಬಾಲಕಿಯಾಗಿದ್ದಾಳೆ. ತನ್ನ ಆರನೇ ವಯಸ್ಸಿನಲ್ಲೇ ಮಂಗೋಲಿಯಾದ ಉಲಾನ್ ಬತಾರ್‌ನಲ್ಲಿ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣೆ ಸಂಬಂಧದ ಏಷ್ಯಾ ಮಟ್ಟದ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದಳು.