ಪಾಠ ಹೇಳುವುದು ಎಂದರೆ ಹೆಚ್ಚುವರಿ ಹೊಣೆಗಾರಿಕೆಯ ಕೆಲಸ. ಒಬ್ಬ ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಅನೇಕ ಆವಿಷ್ಕಾರಿ ಹಾದಿಗಳಲ್ಲಿ ಕಲಿಯುವುನ್ನು ಅಭ್ಯಾಸ ಮಾಡಿಸಬಲ್ಲ.
ಕಾನ್ಪುರದ ಶಿಕ್ಷಕ ಅಮಿತ್ ಕುಮಾರ್ ನಿರಂಜನ್ ಅವರಿಗೆ ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಅಂಕಗಳಿಕೆಗೆ ಪಾಠ ಹೇಳಿಕೊಡುವುದಕ್ಕಿಂತಲೂ ವಿಷಯ ಮನನ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು ಬಹಳ ಇಷ್ಟದ ವಿಚಾರ. ಅಂಕಗಳಿಕೆಯ ಬದಲಿಗೆ ಲಾಜಿಕ್ ಬಳಸಿಕೊಂಡು ಓದುವುದು ನಿಜವಾದ ಓದು ಎನ್ನುವ ಅಮಿತ್ ಕುಮಾರ್ ಆರು ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಭಾರತೀಯರಾದ ಅಮಿತ್ ಕುಮಾರ್, ಹತ್ತು ವರ್ಷಗಳ ನಿರಂತರ ಪರಿಶ್ರಮದಿಂದ ಆರು ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಜೂನ್ 2010ರಿಂದ ನೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾ ಬಂದಿರುವ ಅಮಿತ್ ಕುಮಾರ್, ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟ್, ಶಿಕ್ಷಣ, ರಾಜಕೀಯ ವಿಜ್ಞಾನ & ಸಮಾಜಶಾಸ್ತ್ರಗಳಲ್ಲಿ ನೆಟ್ ಪರೀಕ್ಷೆ ಪಾಸಾಗಿದ್ದಲ್ಲದೇ 2015ರಲ್ಲಿ ಐಐಟಿ-ಕಾನ್ಪುರದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿಯನ್ನು ಪಡೆದಿದ್ದಾರೆ.
ಭ್ರಷ್ಟಾಚಾರ ಖಂಡಿಸಿ ಪತ್ರಕರ್ತರು ಮಾಡಿದ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ
37 ವರ್ಷ ವಯಸ್ಸಿನ ಅಮಿತ್‌ಗೆ ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರದಲ್ಲಿ 12ಕ್ಕೂ ಹೆಚ್ಚು ವರ್ಷಗಳ ಕಾಲ ಬೋಧನೆ ಮಾಡಿದ ಅನುಭವವಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಲು ಅಮಿತ್ ಆಶಯ ಹೊಂಧಿದ್ದಾರೆ.
ಬೋಧನೆ ಮಾಡುವುದು ಐಚ್ಛಿಕ ವಿಷಯವಾಗಬೇಕೇ ಹೊರತು ಅವಕಾಶದಿಂದ ಬರುವಂಥದ್ದಾಗಬಾರದು ಎನ್ನುವ ಅಮಿತ್ ಇಂದಿನ ರಾಜಕೀಯದ ಬಗ್ಗೆ ಮಾತನಾಡುತ್ತಾ,”ಇಂದು ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಭಿಪ್ರಾಯಗಳನ್ನು ನೋಡಿಕೊಂಡು ಅದನ್ನೇ ಹಿನ್ನೆಲೆ ಮಾಹಿತಿಯಾಗಿ ಇಟ್ಟುಕೊಂಡು ರಾಜಕೀಯ ಅಭಿಪ್ರಾಯಗಳನ್ನು ಬೆಳೆಸಿಕೊಳ್ಳುತ್ತಾರೆ. ಇದು ಬಹಳಷ್ಟು ಬಾರಿ ಸರಿಯಾಗಿ ಹಾಗೂ ಸಮತೋಲಿತವಾಗಿ ಇರುವುದಿಲ್ಲ. ಭಾರತೀಯ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಮಾಹಿತಿಗಳು, ಮೂಲ ಕಾನೂನುಗಳು, ಹಕ್ಕುಗಳು ಹಾಗೂ ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಅರಿಯಬೇಕು” ಎನ್ನುತ್ತಾರೆ.
ಮುಂದಿನ ದಿನಗಳಲ್ಲಿ ಮನಃಶಾಸ್ತ್ರ, ನೀತಿಶಾಸ್ತ್ರ ಹಾಗೂ ಸಾಹಿತ್ಯದಲ್ಲೂ ಯುಜಿಸಿ-ನೆಟ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅಮಿತ್ ಕುಮಾರ್ ಇಚ್ಛಿಸಿದ್ದಾರೆ. ತಮ್ಮದೇ ಪಬ್ಲಿಕೇಶನ್ ಒಂದನ್ನು ಆರಂಭಿಸಲು ಚಿಂತಿಸುತ್ತಿರುವ ಅಮಿತ್ ಕುಮಾರ್, ಒಳ್ಳೆಯ ಬರಹಗಾರರಿಂದ ನಿರ್ದಿಷ್ಟ ವಿಷಯಗಳಲ್ಲಿ ಆಳವಾದ ಜ್ಞಾನಪೂರ್ಣ ಕೊಡುಗೆಗಳನ್ನು ಎದುರು ನೋಡುತ್ತಿದ್ದಾರೆ.