ಸಾವನ್ನ ಗೆದ್ದು ಬಂದವರಿಗೆ ಜೀವದ ಪ್ರಾಮುಖ್ಯತೆ ಅಂದರೆ ಏನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಇದೇ ರೀತಿ ಕೊರೊನಾದಿಂದ ಬಳಲಿದ್ದ ಪಾಟ್ನಾದ ಗೌರವ್ ರೈ ಕೂಡ ಸಾಕಷ್ಟು ಹೋರಾಟದ ಬಳಿಕ ಸೋಂಕಿನಿಂದ ಪಾರಾಗಿದ್ದರು.
ತುರ್ತು ಆಮ್ಲಜನಕ ಅವಶ್ಯಕತೆಯಿಂದ ಬಳಲಿದ್ದ ಗೌರವ್ ಸಾವಿನ ಕದ ತಟ್ಟಿ ಬಳಿಕ ವಾಪಸ್ಸಾಗಿದ್ದರು.
ಕೊರೊನಾ ಸೋಂಕನ್ನ ಗೆದ್ದು ಬಂದಿರುವ ಗೌರವ್ ರೈ ಇದೀಗ ಆಕ್ಸಿಜನ್ ಮ್ಯಾನ್ ಅಂತಾ ಫೇಮಸ್ ಆಗಿದ್ದಾರೆ. ಇಲ್ಲಿಯವರೆಗೆ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಹೊಂದಿರುವ ಕೊರೊನಾ ಸೋಂಕಿತರ ಮನೆಗೇ ಈ ವ್ಯವಸ್ಥೆ ಕಲ್ಪಿಸುವ ಮೂಲಕ ಬರೋಬ್ಬರಿ 950 ಜೀವಗಳನ್ನ ಕಾಪಾಡಿದ್ದಾರೆ.
ತಮ್ಮ ವ್ಯಾಗನಾರ್ ಕಾರಿನಲ್ಲಿ ಬೆಳಗ್ಗೆ 5 ಗಂಟೆಯಿಂದ ಆಕ್ಸಿಜನ್ ಸಿಲಿಂಡರ್ಗಳನ್ನ ಮನೆ ಮನೆಗೆ ತಲುಪಿಸೋ ಕಾರ್ಯವನ್ನ ಮಾಡುತ್ತಾರೆ. ಈ ಕೆಲಸ ಮಧ್ಯರಾತ್ರಿಯವರೆಗೂ ಮುಂದುವರಿಯುತ್ತದೆ. ಕೊರೊನಾದಿಂದಾಗಿ ಹೋಂ ಕ್ವಾರಂಟೈನ್ ಆದ ರೋಗಿಯ ಮನೆಗೆ ತೆರಳಿ ಆಕ್ಸಿಜನ್ ವ್ಯವಸ್ಥೆ ಮಾಡಿ ಬರ್ತಾರೆ ಗೌರವ್.
ಅಂದಹಾಗೆ ಈ ಸೇವೆಗೆ ಗೌರವ್ ಸೋಂಕಿತರಿಂದ ನಯಾಪೈಸೆಯನ್ನೂ ಪಡೆಯೋದಿಲ್ಲ. ಕಳೆದೊಂದು ವರ್ಷಗಳಿಂದ ಗೌರವ್ ಈ ಸಮಾಜಸೇವೆಯನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಇವರಿಗೆ ಆಕ್ಸಿಜನ್ ಮ್ಯಾನ್ ಎಂಬ ಹೆಸರು ಬಂದಿದೆ.
ನಾನು ಯಾರ ಬಳಿಯೂ ಹಣಬನ್ನ ಕೇಳೋದಿಲ್ಲ. ಖಾಲಿ ಸಿಲಿಂಡರ್ನ್ನು ಪಡೆಯಬೇಕಾದ ಹಿನ್ನೆಲೆ ಅವರಿಂದ ಫೋಟೋ ಒಂದನ್ನ ತೆಗೆದುಕೊಳ್ತೇನೆ ಎಂದು ಗೌರವ್ ಹೇಳಿದ್ದಾರೆ.
52 ವರ್ಷದ ಗೌರವ್ ರೈ ಕಳೆದ ವರ್ಷ ಜುಲೈನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಗೌರವ್ರನ್ನ ಪಾಟ್ನಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ಕರೆದುಕೊಂಡು ಬರಲಾಗಿತ್ತು.
ಆದರೆ ಗೌರವ್ಗೆ ಒಂದೇ ಒಂದು ಬೆಡ್ ಸಿಗಲಿಲ್ಲ. ಆಮ್ಲಜನಕ ಕೊರತೆ ಕೂಡ ಇದ್ದಿದ್ದರಿಂದ ಗೌರವ್ ತುಂಬಾನೇ ಒದ್ದಾಡುತ್ತಿದ್ದರು. ಆದರೆ ಅವರಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕೂಡ ಸಿಗಲಿಲ್ಲ. 5 ಗಂಟೆಗಳ ಬಳಿಕ ಗೌರವ್ ಪತ್ನಿ ಖಾಸಗಿಯಾಗಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದರು.
ಈ ಘಟನೆ ಬಳಿಕ ಕೊರೊನಾದಿಂದ ಗುಣಮುಖರಾದ ಗೌರವ್ ನನಗೆ ಬಂದ ಕಷ್ಟ ಇನ್ಯಾರಿಗೂ ಬಾರದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದ್ರು. ಹೀಗಾಗಿ ಈ ದಂಪತಿ ತಮ್ಮ ಸ್ವಂತ ಖರ್ಚಿನಿಂದ ಈ ಸಮಾಜಸೇವೆ ಮಾಡುತ್ತಿದೆ.