ಗಾಜಿಯಾಬಾದ್: ಗಾಜಿಯಾಬಾದ್ ನ 7 ವರ್ಷದ ಬಾಲಕಿ ಅಭಿಜಿತಾ ಗುಪ್ತಾಳನ್ನು ವಿಶ್ವದ ಅತ್ಯಂತ ಕಿರಿಯ ಬರಹಗಾರ ʼದ ಇಂಟರ್ನಾಷನಲ್ ಬುಕ್ ಆಫ್ ರೆಕಾರ್ಡ್ಸ್ʼ ಗುರುತಿಸಿದೆ. 7 ನೇ ವಯಸ್ಸಿನಲ್ಲಿ ಕವನ ಮತ್ತು ಗದ್ಯ ಬರವಣಿಗೆಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ಗ್ರಾಂಡ್ ಮಾಸ್ಟರ್ ಆಫ್ ರೈಟಿಂಗ್ ಬಿರುದನ್ನು ನೀಡಿ ಗೌರವಿಸಲಾಗಿದೆ.
ಈಕೆ ಮೇಥಿಲಿಶರಣ್ ಗುಪ್ತ್ ಕುಟುಂಬದ ಮೂರನೇ ತಲೆಮಾರಿನ ಕುಡಿಯಾಗಿದ್ದು, ರಕ್ತದಲ್ಲೇ ಬರವಣಿಗೆ ಬಂದಿದೆ ಎಂಬ ಶ್ಲಾಘನೆ ವ್ಯಕ್ತವಾಗುತ್ತಿದೆ. ಹೀಗಾಗಿ ಸೊಗಸಾಗಿ ಸಣ್ಣ ಕತೆಗಳು ಹಾಗೂ ಕವಿತೆಗಳುಳ್ಳ ಹ್ಯಾಪಿನೆಸ್ ಆಲ್ ಅರೌಂಡ್ ಎಂಬ ಪುಸ್ತಕವನ್ನು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿಜಿತಾ ರಚನೆ ಮಾಡುತ್ತಿದ್ದಾಳೆ.
ಪ್ರಸ್ತುತ ಅಭಿಜಿತಾ 2ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, 5ನೇ ವರ್ಷಕ್ಕೇ ಬರವಣಿಗೆಯ ಹವ್ಯಾಸ ಹುಟ್ಟಿಕೊಂಡಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಪ್ರಸ್ತುತ ಈಕೆ, ಪೋಷಕರೊಂದಿಗೆ ಗಾಜಿಯಾಬಾದ್ ನಲ್ಲಿ ವಾಸವಾಗಿದ್ದು, ತಂದೆ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೆ, ತಾಯಿ ಇಂಜಿನಿಯರ್ ಆಗಿದ್ದಾರೆ. ಸದ್ಯ ಸಾಂಕ್ರಾಮಿಕ ರೋಗಗಳು ಹಾಗೂ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅಭಿಜಿತಾ ಪುಸ್ತಕವನ್ನು ಬರೆಯುತ್ತಿದ್ದಾಳೆ.