ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಮಥುರಾ ದೇವಾಲಯದ ಜಾಗದಲ್ಲಿ ನಿರ್ಮಾಣವಾಗಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಉತ್ತರ ಪ್ರದೇಶ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಮಥುರಾದಲ್ಲಿ ಶ್ರೀ ಕೃಷ್ಣನ ಜನ್ಮಸ್ಥಳದ ಜಾಗದಲ್ಲಿ ನಿರ್ಮಿಸಿರುವ 17ನೇ ಶತಮಾನದಷ್ಟು ಪುರಾತನ ಮಸೀದಿ ತೆರವುಗೊಳಿಸಲು ಕೋರಿ ದೇವಾಲಯದ ಶ್ರೀಕೃಷ್ಣ ವಿರಾಜಮಾನ್ ಎಂಬುವವರು ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮಥುರಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಛಾಯಾ ಶರ್ಮಾ, ಪೂಜಾ ಸ್ಥಳಗಳು (ವಿಶೇಷ ನಿಯಮಾವಳಿ) ಕಾಯ್ದೆ 1991ರ ಪ್ರಕಾರ ಪ್ರಾರ್ಥನಾ ಮಂದಿರಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದಾರೆ.