ಕೊರೊನಾದಿಂದಾಗಿ ಎಲ್ಲೆಡೆ ಆನ್ ಲೈನ್ ಶಿಕ್ಷಣದ ಮೊರೆ ಹೋಗಿದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಬಡ ವಿದ್ಯಾರ್ಥಿಗಳ ಪೋಷಕರಿಗೆ ಸಾಧ್ಯವಾಗುತ್ತಿಲ್ಲ.
ಇದರಿಂದ ಶಿಕ್ಷಣದಿಂದ ವಂಚಿತರಾಗುವ ಚಿಂತೆ ಎದುರಾಗಿದ್ದು, ಈ ಕೊರತೆ ನೀಗಿಸಲು ತಮಿಳುನಾಡಿನ ಶಿಕ್ಷಕಿಯೊಬ್ಬರು ಸ್ವಂತ ಹಣದಲ್ಲಿ 16 ಸ್ಮಾರ್ಟ್ ಫೋನ್ ಖರೀದಿಸಿ, ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಎಲಂಬಲೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಕೆ. ಭೈರವಿ ಅವರು, ಯಾವ ಖಾಸಗಿ ಶಾಲೆಯ ಮಕ್ಕಳಿಗೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ದೃಷ್ಟಿಯಿಂದ ಸ್ಮಾರ್ಟ್ ಫೋನ್, ಸಿಮ್ ಕಾರ್ಡ್ ಕೊಡಿಸಿದ್ದಾರೆ.
ಮುಂದಿನ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಲಿರುವ, ಸ್ಮಾರ್ಟ್ ಫೋನ್ ಇಲ್ಲದ 16 ವಿದ್ಯಾರ್ಥಿಗಳಿಗೆ ಕೊಡಿಸಿರುವುದೂ ಅಲ್ಲದೆ, ಶಾಲೆಗಳು ಆರಂಭ ಆಗುವವರೆಗೆ ತಾವೇ ಕರೆನ್ಸಿ ಹಾಕಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಮನೆಯಲ್ಲೇ ತರಗತಿಯ ವ್ಯವಸ್ಥೆ ಮಾಡಿಕೊಂಡು, ಪಾಠವನ್ನು ರೆಕಾರ್ಡ್ ಮಾಡಿ, ವಾಟ್ಸಾಪ್ ನಲ್ಲಿ ಕಳುಹಿಸುವ ಮೂಲಕ ಕಲಿಕೆ ನಡೆಯುತ್ತಿದೆ ಎನ್ನುತ್ತಾರೆ ಶಿಕ್ಷಕಿ ಭೈರವಿ.