ಹಿಮಾಲಯ ಹಾಗೂ ಗಂಗಾ ಬಯಲಿನ ಪ್ರದೇಶದ ಸೌಂದರ್ಯದಿಂದ ಪ್ರಸಿದ್ಧವಾಗಿರುವ ಉತ್ತರಾಖಂಡದ ಹರಿದ್ವಾರದಲ್ಲಿ 2021ರ ಕುಂಭಮೇಳ ಜರುಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಈ ಸುಂದರ ರಾಜ್ಯದ ಝಲಕ್ ಅನ್ನು ಕಟ್ಟಿಕೊಡುವ ಒಂದು ನಿಮಿಷದ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿರುವ ರಾವತ್, ಪ್ರಕೃತಿ ವಿಕೋಪವೇ ಇರಲಿ, ಕೊರೊನಾದಂಥ ಸಾಂಕ್ರಮಿಕವೇ ಇರಲಿ, ಉತ್ತರಾಖಂಡ ಎಲ್ಲ ರೀತಿಯ ಸಂಕಷ್ಟಗಳನ್ನು ಮೆಟ್ಟಿ ನಿಂತಿದೆ ಎಂದಿದ್ದು, ಹಾಗೇ ಕೊರೊನಾ ಹಬ್ಬದಂತೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಕುಂಭಮೇಳವನ್ನು ಬಹಳ ಕಡಿಮೆ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾಡಲು ಉತ್ತರಾಖಂಡ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಏಕಕಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆಯುವುದನ್ನು ತಪ್ಪಿಸಲೆಂದು ಭಕ್ತಗಣಕ್ಕೆ ಪಾಸ್‌ಗಳನ್ನು ವಿತರಣೆ ಮಾಡುವ ಮೂಲಕ ಅವರ ಹೋಗು-ಬರುವಿಕೆಯನ್ನು ನಿಯಂತ್ರಿಸುವುದಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ರಾವತ್ ತಿಳಿಸಿದ್ದರು. ಉತ್ತರಾಖಂಡದಲ್ಲಿ 44,404 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 542 ಮಂದಿ ಈ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.
https://www.facebook.com/tsrawatbjp/videos/2673581906236935