ಮಧ್ಯ ಪ್ರದೇಶದಲ್ಲಿ ತರಲಾಗಿರುವ ಲವ್ ಜಿಹಾದ್ ವಿರೋಧಿ ಕಾನೂನಿನ ಅಡಿ ಮೊದಲ ಬಂಧನವಾಗಿದೆ.
ಇಲ್ಲಿನ ಭರ್ವಾನಿಯ 22 ವರ್ಷದ ಮಹಿಳೆಯೊಬ್ಬರು ಕೊಟ್ಟ ದೂರಿನ ಅನ್ವಯ ಆಪಾದಿತ ಸೊಹೇಲ್ ಮನ್ಸೂರಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆ 2020, ಐಪಿಸಿಯ 376 (ಅತ್ಯಾಚಾರ), 506 (ಬೆದರಿಕೆ ಒಡ್ಡುವುದು), 323 (ಉದ್ದೇಶಪೂರಿತವಾಗಿ ಗಾಯಗೊಳಿಸುವುದು) ಹಾಗೂ 294 (ಅಸಭ್ಯ ವರ್ತನೆ) ಕಾಯಿದೆಗಳ ಅಡಿ ಆರೋಪಪಟ್ಟಿ ದಾಖಲಿಸಲಾಗಿದೆ.
ಸುಳ್ಳು ಹೆಸರಿಟ್ಟುಕೊಂಡು ತನ್ನದೇ ಸಮುದಾಯದವನಂತೆ ತೋರಿಸಿಕೊಂಡು ತನ್ನನ್ನು ಮರಳು ಮಾಡಿದ ಬಳಿಕ ನಾಲ್ಕು ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾನೆ ಎಂದು ಸೊಹೇಲ್ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ಧರ್ಮಾಂತರವಾಗಲು ತನ್ನ ಮೇಲೆ ಒತ್ತಡ ಹಾಕಲು ಮುಂದಾದ ಸೊಹೇಲ್ ವಿರುದ್ಧ ರೋಸಿ ಹೋದ ಸಂತ್ರಸ್ತೆ ದೂರು ಕೊಟ್ಟಿದ್ದಾರೆ.
ಇಂದೋರ್‌ನಿಂದ 170ಕಿಮೀ ದೂರದಲ್ಲಿರುವ ಪಲ್ಸುದ್ ಪಟ್ಟಣದಲ್ಲಿ ಸೊಹೇಲ್‌ನನ್ನು ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಯ ಪರಿಚಯವಾಗಿದೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೊಹೇಲ್ ಪಾರ್ಟಿ ಹಾಗೂ ಇತರ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ಮಾಡಿಕೊಂಡು ಇದ್ದ.
“ಕಾರ್ಯಕ್ರಮವೊಂದರಲ್ಲಿ ಸಂತ್ರಸ್ತೆಯನ್ನು ಭೇಟಿಯಾದ ಸೊಹೇಲ್, ತನ್ನನ್ನು ಸನ್ನಿ ಎಂದು ಪರಿಚಯ ಮಾಡಿಕೊಂಡಿದ್ದಲ್ಲದೇ ತಾನೂ ಸಹ ಆಕೆಯ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ. ಇಬ್ಬರೂ ಮೊಬೈಲ್ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದಾರೆ. ಶೀಘ್ರವೇ ಇಬ್ಬರ ನಡುವೆ ಸಂಬಂಧ ಶುರುವಾಗಿದೆ. ಆಕೆಗೆ ಆಸೆ ಹುಟ್ಟಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಸೊಹೇಲ್” ಎಂದು ವಿಚಾರಣಾಧೀನ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.