
ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಎಂಟ್ರಿ ಕೊಟ್ಟ ಬಳಿಕ ಇದೀಗ ಮನೆ ಮನೆಗೆ ತೆರಳಿ ಲಸಿಕೆಯನ್ನ ನೀಡುವ ಬಗ್ಗೆ ಸಿದ್ಧತೆಯನ್ನ ನಡೆಸಲಾಗ್ತಿದೆ. ದೇಶದ ಹಲವಾರು ಕಂಪನಿಗಳು ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಸೌಕರ್ಯದ ಬಗ್ಗೆ ಕೇಂದ್ರ ಸರ್ಕಾರವನ್ನ ಸಂಪರ್ಕಿಸಿವೆ. ಹೀಗಾಗಿ ಈ ಸಂಬಂಧ ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಈವರೆಗೆ 10 ಕೋಟಿಗೂ ಹೆಚ್ಚು ಜನರಿಗೆ ಲಸಿಕೆಯನ್ನ ನೀಡಲಾಗಿದೆ. ಇದೀಗ ಸ್ಪುಟ್ನಿಕ್ ವಿ ಲಸಿಕೆಗೆ ಅನುಮತಿ ಸಿಕ್ಕ ಬಳಿಕ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಅಭಿಯಾನವನ್ನ ನಡೆಸಲು ತಯಾರಿ ನಡೆಯುತ್ತಿದೆ.
ಕೇಂದ್ರ ಆರೋಗ್ಯ ಇಲಾಖೆ ಮುಂದಿನ ಮೂರು ತಿಂಗಳ ಒಳಗಾಗಿ ದೇಶದಲ್ಲಿ ಮುಕ್ಕಾಲು ಭಾಗ ಜನತೆಗೆ ಲಸಿಕೆ ಹಾಕುವ ಪ್ಲಾನ್ನಲ್ಲಿದೆ. ಇದಕ್ಕಾಗಿ 45 ವರ್ಷಕ್ಕಿಂತ ಕೆಳಗಿನವರಿಗೂ ಲಸಿಕೆ ನೀಡುವ ಬಗ್ಗೆಯೂ ತಯಾರಿ ನಡೆಯುತ್ತಿದೆ. 45 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಲು ಅನುಮತಿ ಸಿಗುತ್ತಿದ್ದಂತೆಯೇ ಇದರ ಜೊತೆಯಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನವನ್ನೂ ಆರಂಭಿಸುವ ಮೂಲಕ ಲಸಿಕೆ ನೀಡುವ ಪ್ರಕ್ರಿಯೆಯ ವೇಗವನ್ನ ಇನ್ನಷ್ಟು ಹೆಚ್ಚು ಮಾಡಲು ಸಹಾಯವಾಗುತ್ತೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಾಕಷ್ಟು ಫಾರ್ಮಾ ಕಂಪನಿಗಳು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆಯನ್ನ ಸಲ್ಲಿಸಿವೆ. ಇದರಲ್ಲಿ ಖಾಸಗಿ ಹಾಗೂ ಸರ್ಕಾರಿ ಕಂಪನಿಗಳ ಲಸಿಕೆಗಳನ್ನ ಜನರ ಮನೆಗೆ ತೆರಳಿ ನೀಡುವ ಬಗ್ಗೆ ಮಾತನಾಡಲಾಗಿದೆ. ಅಲ್ಲದೇ ಇದಕ್ಕಾಗಿ ಪ್ರತಿ ವ್ಯಕ್ತಿಯಿಂದ 25 ರಿಂದ 37 ರೂಪಾಯಿಯನ್ನ ಪಡೆಯುವ ವಿಚಾರವೂ ಕೇಂದ್ರ ಸರ್ಕಾರದ ಮುಂದಿದೆ.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮನೆ ಮನೆಗೆ ಲಸಿಕೆಗಾಗಿ ಈವರೆಗೆ ಯಾವುದೇ ಕಂಪನಿಗೂ ಅನುಮತಿ ನೀಡಲಾಗಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯ ಹೇಳುವಂತೆ ಒಂದು ವೇಳೆ ಮನೆ ಮನೆಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ರು ಅಂದರೆ ಈ ಯೋಜನೆಯ ಆರಂಭ ಸರ್ಕಾರಿ ನೆಟ್ವರ್ಕ್ಗಳನ್ನ ಬಳಕೆ ಮಾಡಿಕೊಂಡೇ ಶುರುವಾಗಲಿದೆ.
ದೇಶದಲ್ಲಿ ಸದ್ಯ ಕೊರೊನಾ ಸೋಂಕು ಏರುತ್ತಿರುವ ಪ್ರಮಾಣ ನೋಡಿದ್ರೆ ಲಸಿಕೆ ನೀಡುವ ಪ್ರಕ್ರಿಯೆಗೆ ಇನ್ನಷ್ಟು ವೇಗವನ್ನ ತುಂಬಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಏನೇನು ಮಾಡಬೇಕೋ ಆ ಎಲ್ಲಾ ಕ್ರಮಗಳನ್ನ ಕೇಂದ್ರ ಸರ್ಕಾರ ಹಂತ ಹಂತವಾಗಿ ಕೈಗೊಳ್ಳುತ್ತಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಇನ್ನೇನು ಕೆಲವೇ ದಿನಗಳಲ್ಲಿ 45 ವರ್ಷದ ಕಡಿಮೆ ವಯಸ್ಸಿನವರಿಗೂ ಲಸಿಕೆ ನೀಡುವ ಪ್ರಕ್ರಿಯೆ ಚಾಲನೆ ಸಿಗಲಿದೆ.