
ಉತ್ತರ ಪ್ರದೇಶದ ಮೊರದಾಬಾದ್ ನಗರದ ಮನೆಯೊಂದರಲ್ಲಿ ನಡೆದಿದ್ದ ಜೋಡಿ ಕೊಲೆಯ ಮಾಹಿತಿಯನ್ನು, ಕೊಲೆಯಾದ ವ್ಯಕ್ತಿಯ ತಮ್ಮನಿಗೆ ಶ್ವಾನವೊಂದು ಮಾಹಿತಿ ನೀಡಿರುವ ವಿಚಿತ್ರ ಘಟನೆ ನಡೆದಿದೆ.
ಸೋಮವಾರ ರಾತ್ರಿ ಮೊರದಾಬಾದ್‌ನ ಥಾಕುದ್ವಾರ ಪ್ರದೇಶದಲ್ಲಿ ವಾಸವಾಗಿದ್ದ ಮೋಹಿತ್ ವರ್ಮಾ ಹಾಗೂ ಪತ್ನಿ ಮೋರಾ ಅವರ ಜೋಡಿ ಕೊಲೆ ನಡೆದಿತ್ತು. ಈ ಮಾಹಿತಿ ಮೋಹಿತ್ ವರ್ಮಾ ಅವರ ಸಹೋದರ ಸಂಜಯ್ ವರ್ಮಾ ಅವರಿಗೆ ಮೋಹಿತ್ ಅವರು ಸಾಕಿದ್ದ ಶ್ವಾನ ಜಿಂಜರ್ ನೀಡಿದೆ.
ಸಹಜವಾಗಿ ಮಾಲೀಕರೊಂದಿಗೆ ಆಗಮಿಸಿದ್ದ ಜಿಂಜರ್ ಕೊಲೆಯಾದ ಬಳಿಕ ಮೋಹಿತ್ ಅವರ ಸಹೋದರನ ಮನೆಗೆ ತೆರಳಿ, ಜೋರಾಗಿ ಬೊಗಳಲು ಶುರುಮಾಡಿದೆ. ಶ್ವಾನದ ಈ ನಡೆಯಿಂದ ಅಚ್ಚರಿಗೊಂಡ ಸಂಜಯ್ ಕೂಡಲೇ, ಸಹೋದರನಿಗೆ ಕರೆ ಮಾಡಿದ್ದಾರೆ. ಆದರೆ ಪ್ರತಿಕ್ರಿಯೆ ಬಾರದಿದ್ದಾಗ, ಸಂಜಯ್ ತಮ್ಮ ಮಗನನ್ನು ಶ್ವಾನದೊಂದಿಗೆ ಕಳುಹಿಸಿದ್ದಾರೆ.
ಆ ವೇಳೆ ಜೋಡಿ ಕೊಲೆಯಾಗಿರುವುದು ಬಹಿರಂಗವಾಗಿದ್ದು, ಕೂಡಲೇ ತಂದೆಯ ಸಹಾಯದೊಂದಿಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸಿದ್ದು, ಕೇಬಲ್ ವ್ಯಾಪಾರದಲ್ಲಿದ್ದ ಮೋಹಿತ್ ಅವರು, ಹಳೇ ವೈಷಮ್ಯದ ಕಾರಣ ಹತ್ಯೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.