
ಸ್ನೇಹ ಅನ್ನೋದು ಕೇವಲ ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಸಖತ್ತಾಗೇ ಇರುತ್ತದೆ. ತಮಿಳುನಾಡಿನ ಮದುರೈನಲ್ಲಿ ಹಸು-ಗೂಳಿಯೊಂದರ ಫ್ರೆಂಡ್ ಶಿಪ್ ಸ್ಟೋರಿ ಸಖತ್ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಭಾವುಕರಾಗಿದ್ದಾರೆ.
ಇಲ್ಲಿನ ಪಲಮೆಂಡು ಪ್ರದೇಶದಲ್ಲಿ ಗೋವು ಲಕ್ಷ್ಮೀ ಹಾಗೂ ಗೂಳಿ ಮಂಜಮಲೈ ಇಬ್ಬರೂ ಒಂದೇ ಕಡೆ ಹುಲ್ಲು ಮೇಯುತ್ತಾ ಇದ್ದರು. ಇಬ್ಬರನ್ನೂ ಸಾಕುತ್ತಿದ್ದ ಮಣಿಕಂಠನ್ ಎಂಬ ವ್ಯಕ್ತಿ ಲಕ್ಷ್ಮಿಯನ್ನು ಬೇರೊಬ್ಬರಿಗೆ ಮಾರಿಬಿಟ್ಟಿದ್ದಾರೆ.
ಲಕ್ಷ್ಮಿಯನ್ನು ಟೆಂಪೋದಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ಕಂಡು ದಿಗ್ಭ್ರಾಂತನಾದ ಮಂಜಮಲೈ, ಆ ಟೆಂಪೋವನ್ನು ಒಂದು ಗಂಟೆಯಷ್ಟು ಸಮಯ ಹಿಂಬಾಲಿಸಿಕೊಂಡು ಓಡಿದ್ದಾನೆ. ಪದೇ ಪದೇ ಆ ಟೆಂಪೋವನ್ನು ಅಡ್ಡಗಟ್ಟಿದ ಮಂಜಮಲೈ ಗ್ರಿಲ್ ಒಳಗೆ ತನ್ನ ಮುಖವನ್ನು ತೂರಿ ಲಕ್ಷ್ಮಿಯನ್ನು ಮಾತನಾಡಿಸಲು ಯತ್ನಿಸಿದ್ದಾನೆ.
ಗೋವುಗಳ ಈ ಕಥೆಯನ್ನು ವಿಡಿಯೋ ಮಾಡಿದ್ದು, ಅದು ತಮಿಳುನಾಡು ಉಪ ಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಪುತ್ರ ಜಯಪ್ರದೀಪ್ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು, ಲಕ್ಷ್ಮಿಯನ್ನು ಖರೀದಿಸಿದ್ದ ವ್ಯಕ್ತಿಯಿಂದ ಆಕೆಯನ್ನು ಬಿಡಿಸಿ ಹತ್ತಿರದ ದೇವಸ್ಥಾನಕ್ಕೆ ಕಳುಹಿಸಿದ್ದಾರೆ.