ಹಿಮ ಆವರಿಸಿದ ಪರ್ವತಗಳು, ಗಿರಿ ಕಣಿವೆಗಳಿಂದ ಕೂಡಿರುವ ಮನಾಲಿಯನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೂ ಕರೆಯಲಾಗುತ್ತದೆ.
ಸಾಹಸ ಕ್ರೀಡೆಗಳಿಗೂ ಫೇಮಸ್ ಆಗಿರುವ ಮನಾಲಿ, ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ. ಹಿಮಾಚಲ ಪ್ರದೇಶದ ಸುಂದರ ಗಿರಿಧಾಮವಾಗಿರುವ ಮನಾಲಿ ಸುಮಾರು 1990 ಮೀಟರ್ ಎತ್ತರವಿದೆ. ಕುಲು ಜಿಲ್ಲೆಯ ಗಡಿಯಲ್ಲಿರುವ ಮನಾಲಿಯ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.
ಸದಾ ಮಂಜಿನಿಂದ ಆವೃತವಾಗಿರುವ ಇಲ್ಲಿನ ಬೆಟ್ಟಸಾಲು ಕಣಿವೆಗಳನ್ನು ‘ಬೆಳ್ಳಿಯ ಕಣಿವೆಗಳು’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಹಿತವಾದ ಮತ್ತು ಆಹ್ಲಾದಕರ ವಾತಾವರಣ ಇಲ್ಲಿರುತ್ತದೆ. ಮೊದಲಿಗೆ ಇದನ್ನು ಮನು ನಿಲಯ ಎಂದು ಕರೆಯಲಾಗುತ್ತಿತ್ತು. ಅದೇ ಕಾಲಕ್ರಮೇಣ ಮನಾಲಿಯಾಗಿದೆ ಎಂದು ಹೇಳಲಾಗುತ್ತದೆ.
ಪುರಾತನ ದೇವಾಲಯಗಳು ಇಲ್ಲಿವೆ. ಮನು, ಹಿಡಿಂಬಾ ಮೊದಲಾದ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.
ಗಿರಿಕಣಿವೆಯ ರಸ್ತೆಗಳು, ವಿಶಿಷ್ಟ ರಚನೆಯ ಮನೆಗಳು, ವ್ಯಾಪಾರಿಗಳು, ಸಾಹಸ ಕ್ರೀಡೆಗಳು ಒಂದೇ ಎರಡೇ ಇಲ್ಲಿನ ಹಲವು ದೃಶ್ಯಗಳನ್ನು ಕಣ್ತುಂಬಿಕೊಳ್ಳಲು.
ಸೇಬಿನ ತೋಟಕ್ಕೂ ಮನಾಲಿ ಫೇಮಸ್. ಮನಾಲಿಯ ಜನರಿಗೆ ಹೆಚ್ಚಿನ ಆದಾಯವನ್ನು ತಂದುಕೊಡುವುದೇ ಸೇಬು ಮತ್ತು ಪ್ರವಾಸೋದ್ಯಮ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಪ್ರವಾಸೋದ್ಯಮಕ್ಕೆ ಅನುಕೂಲಕರವಾಗಿಲ್ಲ ಎಂಬ ಭಾವನೆಯಿಂದ ಮನಾಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಬಿಯಾಸ್ ನದಿ, ಸುರಿಯುವ ಮಳೆ, ಹಿಮ, ಮೈ ಕೊರೆಯುವ ಚಳಿ ಇಲ್ಲಿನ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಹನಿಮೂನ್ ಗೆ ಹೋಗುವವರಿಗೆ ಮನಾಲಿ ಪ್ರಶಸ್ತವಾದ ಸ್ಥಳ ಎಂದೂ ಹೇಳಲಾಗುತ್ತದೆ.