ಗೋದಾವರಿ ನದಿ ನೀರಿನ ರಕ್ಷಣೆಗೆ ಮುಂದಾದ ವ್ಯಕ್ತಿಯೊಬ್ಬರು ಜನರ ಬಳಿ ಕಸವನ್ನ ಎಲ್ಲೆಂದರಲ್ಲಿ ಬಿಸಾಡಬೇಡಿ ಎಂದು ಮನವಿ ಮಾಡುವ ಮೂಲಕ ಪರಿಸರ ಪ್ರಿಯರ ಮನಗೆದ್ದಿದ್ದಾರೆ. ಚಂದ್ರ ಕಿಶೋರ್ ಪಾಟೀಲ್ ಎಂಬ ಹೆಸರಿನ ವ್ಯಕ್ತಿ ಕಸದ ರಾಶಿಯ ಪಕ್ಕ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಐಎಫ್ಎಸ್ ಅಧಿಕಾರಿ ಶ್ವೇತಾ ಬೊಡ್ಡು ಎಂಬವರು ಈ ಫೋಟೋವನ್ನ ಕ್ಲಿಕ್ಕಿಸಿದ್ದಾರೆ. ಬ್ರಿಡ್ಜ್ ಸಮೀಪ ನಿಂತ ಚಂದ್ರ ಕಿಶೋರ್ ಕಸ ಎಸೆಯಲು ಬಂದವರನ್ನ ತಡೆಯುತ್ತಿದ್ದಾರಂತೆ. ಈ ಫೋಟೋವನ್ನ ಶೇರ್ ಮಾಡಿರುವ ಶ್ವೇತಾ, ನಾಶಿಕ್ನ ಗೋದಾವರಿ ತೀರದಲ್ಲಿ ನಿಂತಿರುವ ವ್ಯಕ್ತಿ ದಸರಾ ಹಬ್ಬದ ಸಂದರ್ಭದಲ್ಲಿ ಉಂಟಾದ ತ್ಯಾಜ್ಯಗಳನ್ನ ಎಸೆಯಲು ಬರುವವರನ್ನ ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದು ಎಚ್ಚರಿಸುವ ಮೂಲಕ ನದಿಗೆ ಕಸ ಎಸೆಯದಂತೆ ಎಚ್ಚರಿಸುತ್ತಿದ್ದಾರೆ ಅಂತಾ ಬರೆದುಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿರುದ ಚಂದ್ರ ಕಿಶೋರ್, ನಾನು ಮುಂಜಾನೆಯಿಂದ ರಾತ್ರಿ 11 ಗಂಟೆಯವರೆಗೂ ಬ್ರಿಡ್ಜ್ ಬಳಿಯೇ ನಿಂತು ಕಸ ಎಸೆಯುವವರ ಮೇಲೆ ಕಣ್ಣಿಟ್ಟಿರುತ್ತೇನೆ. ಯಾರಿಗೂ ಸಹ ನದಿಗೆ ಕಸ ಎಸೆಯಲು ನಾನು ಅವಕಾಶ ಮಾಡಿಕೊಡಲ್ಲ. ಕಳೆದ 5 ವರ್ಷಗಳಿಂದ ನಾನು ಈ ಕೆಲಸ ಮಾಡುತ್ತಿದ್ದು ನನ್ನ ಆರೋಗ್ಯ ನನಗೆ ಸಾಥ್ ನೀಡುವವರೆಗೂ ನಾನು ಈ ಸೇವೆ ಮಾಡುತ್ತೇನೆ ಅಂತಾ ಹೇಳಿದ್ದಾರೆ.