ಬಿಲಾಸ್ಪುರ: ಚತ್ತೀಸ್ ಘಡ ರಾಜ್ಯದ ಬಿಲಾಸ್ಪುರ ಸಮೀಪದ ರತನ್ ಪುರದ ಕುಟ್ಟಾಘಾಟ್ ಅಣೆಕಟ್ಟೆಯ ನೀರಿನ ಪ್ರವಾಹಕ್ಕೆ ಸಿಲುಕಿ ರಾತ್ರಿ ಕಳೆದ ವ್ಯಕ್ತಿಯನ್ನು ಭಾರತೀಯ ವಾಯುಪಡೆ ರಕ್ಷಿಸಿದ್ದು, ಈಗಾಗಲೇ ಸುದ್ದಿಯಾಗಿದೆ.
ಆದರೆ, ಆತ ಹೆಂಡತಿ ಜತೆ ಜಗಳ ಮಾಡಿಕೊಂಡು ನಾಲೆಗೆ ಹಾರಿದ್ದ ಎಂಬುದು ಬೆಳಕಿಗೆ ಬಂದ ಹೊಸ ಸುದ್ದಿ. ಸ್ಥಳೀಯ ಪತ್ರಿಕೆಯೊಂದು ಈ ಸಂಬಂಧ ವರದಿ ಮಾಡಿದೆ. ಈತನ ವಿಚಾರ ಕೇಳಿ ಜನ ಬಿದ್ದುಬಿದ್ದು ನಕ್ಕಿದ್ದಾರೆ.
ಗಿಡೌರಿ ಗ್ರಾಮದ ಜಿತೇಂದ್ರ ಕಶ್ಯಪ್ ನಾಲೆಗೆ ಹಾರಿದಾತ. “ಪತ್ನಿಯ ಜತೆ ಜಗಳ ಮಾಡಿಕೊಂಡೆ, ಆಕೆಯನ್ನು ಹೆದರಿಸಲು ನೀರಿಗೆ ಹಾರಿದೆ. ಆದರೆ, ನೀರಿನ ರಭಸ ಇಷ್ಟು ಇದೆ ಎಂದು ಗೊತ್ತಿರಲಿಲ್ಲ” ಎಂದು ಆತ ಹೇಳಿಕೆ ನೀಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕುಟ್ಟಾಘಾಟ್ ಅಣೆಕಟ್ಟೆಯಿಂದ ನೀರು ಹೊರಬಿಟ್ಟಿದ್ದರಿಂದ ನಾಲೆಯಲ್ಲಿ ರಭಸದಿಂದ ನೀರು ಹರಿಯುತ್ತಿತ್ತು. ನಾಲೆಗೆ ಹಾರಿದ ಜಿತೇಂದ್ರ ಕೊಚ್ಚಿ ಹೋಗುತ್ತಿದ್ದ. ಬಂಡೆಯೊಂದನ್ನು ಹಿಡಿದುಕೊಂಡು ಇಡೀ ರಾತ್ರಿ ಕಳೆದಿದ್ದ. ಮರುದಿನ ಭಾರತೀಯ ವಾಯುಪಡೆಯ ಹೆಲಿಕ್ಯಾಪ್ಟರ್ ನಿಂದ ಹಗ್ಗ ಬಿಟ್ಟು ಆತನನ್ನು ಮೇಲೆಳೆದು ರಕ್ಷಿಸಲಾಗಿತ್ತು. ಬಿಲಾಸ್ಪುರ ಪೊಲೀಸರು ರಕ್ಷಣೆಯ ವಿಡಿಯೋವನ್ನು ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ.
https://www.instagram.com/tv/CD-tojjl6Ug/?utm_source=ig_embed