
ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಗೋವರ್ಧನ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಫಲಾ ಕಾಯ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. 36 ವರ್ಷದ ಟೆಂಪೋ ಚಾಲಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿ ದೂರು ನೀಡಿದ್ದು ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದ್ಯಪಾನ ಮಾಡುವ ಅಭ್ಯಾಸವಿದ್ದ ಟೆಂಪೋ ಚಾಲಕ ಪತ್ನಿಯನ್ನು ಹೊಡೆಯುತ್ತಿದ್ದರಿಂದ ಮಹಿಳೆ, ಮಗಳನ್ನು ಕರೆದುಕೊಂಡು ತವರಿಗೆ ಹೋಗಿದ್ದಳು.
ತವರು ಮನೆಗೆ ಹೋಗಿ ಗಲಾಟೆ ಮಾಡಿದ ಆರೋಪಿ ತನ್ನೊಂದಿಗೆ ಮಗಳನ್ನು ಕರೆದುಕೊಂಡು ಬಂದು ಸಹೋದರನ ಬಳಿ ಬಿಟ್ಟಿದ್ದ. ಭಾನುವಾರ ರಾತ್ರಿ ಟೆಂಪೋ ಒಳಗೆ ಮಗಳನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿ ತಲುಪಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಿರ್ವಾ ಡಿಎಸ್ಪಿ ಪ್ರೇಮ್ ಧಾಂಡೆ ತಿಳಿಸಿದ್ದಾರೆ.