ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಕಲಿ ಸಹಿ ಇರುವ ಪತ್ರವನ್ನು ತೋರುವ ಮೂಲಕ ಹೆಣ್ಣಿನ ಮನೆಯವರಿಗೆ ವಂಚಿಸಿ ಮದುವೆಯಾಗಿದ್ದ 31 ವರ್ಷದ ವ್ಯಕ್ತಿಯನ್ನು ರಾಜಸ್ಥಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.
ಹುಡುಗಿಯ ಮನೆಯವರು ಖುದ್ದು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ತಮಗೆ ಆದ ವಂಚನೆ ಬಗ್ಗೆ ವಿವರಿಸಿದ ಏಳು ತಿಂಗಳ ಬಳಿಕ ಈ ಬಂಧನವಾಗಿದೆ. ಅಮಿತ್ ಕುಮಾರ್ ಶರ್ಮಾ ಹೆಸರಿನ ಈ ಆಪಾದಿತನ ವಂಚನೆ ಜಾಲ ಬಲು ಕುತೂಹಲಕಾರಿಯಾಗಿದೆ.
“ಶರ್ಮಾಗೆ ಕೆಲವೊಂದಷ್ಟು ಬಂಧುಗಳು ಅಲ್ವಾರ್‌ನಲ್ಲಿದ್ದಾರೆ. ಹೀಗಾಗಿ ಆತ ಹುಡುಗಿಯ ಮನೆಯವರೊಂದಿಗೆ ನಿಕಟತೆ ಬೆಳೆಸಿಕೊಂಡಿದ್ದಾನೆ. 2018ರಲ್ಲಿ ಹುಡುಗಿಯೊಂದಿಗೆ ಮೊದಲ ಬಾರಿಗೆ ಭೇಟಿಯಾದಾಗ ತಾನು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಇದಾದ ಮೇಲೆ ಎನ್‌ಟಿಪಿಸಿ ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿ ಕೆಲಸ ಸಿಕ್ಕಂತೆ ಇರುವ ನಕಲಿ ಪತ್ರವೊಂದನ್ನು ಆತ ಹುಡುಗಿ ಮನೆಯವರಿಗೆ ತೋರಿದ್ದು, ಆ ಪತ್ರಕ್ಕೆ ಪ್ರಧಾನಿಯ ಸಹಿ ಇರುವುದಾಗಿ ತಿಳಿಸಿದ್ದಾನೆ.
ಹುಡುಗಿಯ ಮನೆಯವರು ಈತನ ಮಾತನ್ನು ನಂಬಿದ್ದು, 2018ರಲ್ಲಿ ಮದುವೆಯನ್ನೂ ಮಾಡಿದ್ದಾರೆ. ಇದಾದ ಮೇಲೆ ಹುಡುಗಿಯ ಮನೆಯವರು ವಂಚನೆಯ ದೂರು ಕೊಟ್ಟಿದ್ದು, ಆಪಾದಿತನ ವಿರುದ್ಧ ಸೆಕ್ಷನ್ 498-ಎ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಅಲ್ವಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿ ಗೌತಮ್ ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ, ತಾನು ಮಾಡಿದ ಒಳ್ಳೆಯ ಕಾರ್ಯವೊಂದಕ್ಕೆ ಹತ್ತು ಲಕ್ಷ ರೂ.ಗಳ ಬಹುಮಾನವೂ ಸಿಕ್ಕಿರುವುದಾಗಿ ಗೌತಮ್ ಹೇಳಿಕೊಂಡಿದ್ದಾನೆ.
ಮೇ 8, 2020ರಂದು ಪ್ರಧಾನ ಮಂತ್ರಿ ಕಾರ್ಯಾಲಯದ ಉಪ ನಿದೇರ್ಶಕ ಪಿ.ಕೆ. ಇಸ್ಸಾರ್ ಅವರು ರಾಜಸ್ಥಾನ ಡಿಜಿಪಿಗೆ ಪತ್ರ ಬರೆದಿದ್ದು, ಆಪಾದಿತ ಪ್ರಧಾನಿಯ ನಕಲಿ ಸಹಿಯನ್ನು ಬಳಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ದೂರನ್ನು ಆಧರಿಸಿ ಸಿಐಡಿ ತನಿಖೆ ನಡೆಸಲಾಗಿದೆ. ಸುದೀರ್ಘ ತನಿಖೆ ಬಳಿಕ ಡಿಸೆಂಬರ್ 10ರಂದು ಆಪಾದಿತನನ್ನು ಬಂಧಿಸಲು ಸೂಚಿಸಲಾಗಿದೆ. ಇದಾದ ಬಳಿಕ ಅಲ್ವಾರ್ ಜಿಲ್ಲಾ ಪೊಲೀಸರ ತಂಡವು ಮಹಾರಾಷ್ಟ್ರಕ್ಕೆ ತೆರಳಿ ಆಪಾದಿತನನ್ನು ಬಂಧಿಸಿದೆ.