ಬೆಂಗಳೂರಿನಲ್ಲಿ ವಾಸವಾಗಿದ್ದ ತನ್ನ ಪತ್ನಿಯನ್ನು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ಫ್ಲೈಟ್ ನಲ್ಲಿ ಕೋಲ್ಕತ್ತಾಗೆ ತೆರಳಿ ಅಲ್ಲಿ ಅತ್ತೆಯನ್ನು ಗುಂಡಿಕ್ಕಿ ಕೊಂದು ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಮಿತ್ ತನ್ನ ಪತ್ನಿ ಶಿಲ್ಪ ಹಾಗೂ ಅತ್ತೆಯನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಈಗ ಎರಡು ವರ್ಷಗಳಿಂದ ಪತ್ನಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದನೆನ್ನಲಾಗಿದೆ.
ಪತ್ನಿ ವೈಟ್ ಫೀಲ್ಡ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರೆ ಪತಿ ಮಹಾದೇವಪುರದ ಅಪಾರ್ಟ್ಮೆಂಟ್ ನಲ್ಲಿದ್ದ. ವಿಚ್ಛೇದನ ಕೋರಿ ದಂಪತಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದು, ಪತ್ನಿಯೊಂದಿಗೆ ಮಗ ಇದ್ದ ಕಾರಣ ನ್ಯಾಯಾಲಯದ ಅನುಮತಿ ಮೇರೆಗೆ ಶನಿವಾರ ಸಂಜೆ ಕರೆದುಕೊಂಡು ಹೋಗಿ ಸ್ವಲ್ಪ ಕಾಲ ಕಳೆದು ವಾಪಾಸ್ ತಂದು ಬಿಡುತ್ತಿದ್ದ.
ಅದರಂತೆ ಕಳೆದ ಶನಿವಾರ ಪತ್ನಿ ಮನೆಗೆ ಬಂದ ಅಮಿತ್, ಆಕೆಯನ್ನು ಹತ್ಯೆ ಮಾಡಿ ಮಗನನ್ನು ಕರೆದುಕೊಂಡು ಕೋಲ್ಕತ್ತಾಗೆ ತೆರಳಿದ್ದಾನೆ. ಅಲ್ಲಿ ಮಗನನ್ನು ತನ್ನ ಸಹೋದರನ ಮನೆಗೆ ಬಿಟ್ಟ ಬಳಿಕ ಅತ್ತೆ – ಮಾವ ನೆಲೆಸಿರುವ ಮನೆಗೆ ತೆರಳಿ ಅತ್ತೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಇವನ ರೌದ್ರಾವತಾರ ನೋಡಿದ ಮಾವ ಕೂಡಲೇ ಹೊರಬಂದು ಬಾಗಿಲ ಚಿಲಕ ಹಾಕಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ಬರುವಷ್ಟರಲ್ಲೇ ಅಮಿತ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಕೋಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಇಲ್ಲಿ ನಡೆದಿರುವ ಕೊಲೆಯ ವಿಚಾರವನ್ನು ತಿಳಿಸಿದ್ದಾರೆ. ಮಹದೇವಪುರ ಪೊಲೀಸರು ಅಪಾರ್ಟ್ಮೆಂಟ್ ಬಾಗಿಲು ಮುರಿದು ಒಳ ಪ್ರವೇಶಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಹತ್ಯೆಗೆ ಕಾರಣವೆಂದು ಹೇಳಲಾಗಿದೆ.