ನವದೆಹಲಿ: ಹೃದಯದ ಶೇ.85 ಭಾಗ ಕಾರ್ಯ ಸ್ಥಗಿತವಾಗಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಮರು ಜೀವ ನೀಡಿದ್ದಾರೆ.
ರಾಜಕುಮಾರ್ ರಾವತ್ ಎಂಬ 29 ವರ್ಷದ ವ್ಯಕ್ತಿ ಜೂನ್ ನಲ್ಲಿ ಉಸಿರಾಟದ ತೊಂದರೆಯಿಂದ ಮ್ಯಾಕ್ಸ್ ಆಸ್ಪತ್ರೆ ಸೇರಿದ್ದ. ಪರಿಶೀಲಿಸಿದಾಗ ಆತನ ಹೃದಯ ಶೇ.15 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ರಾವತ್ 21 ವರ್ಷದವನಿದ್ದಾಗ 2012 ರಲ್ಲಿ ಆತನಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. 2015 ರಲ್ಲಿ ಫೇಸ್ ಮೇಕರ್(ರಕ್ತ ಪಂಪ್ ಮಾಡುವ ಕೃತಕ ಸಾಧನ) ಅಳವಡಿಸಲಾಗಿತ್ತು ಎಂಬುದು ತಿಳಿಯುತ್ತದೆ.
ದಾನಿಗಳೊಬ್ಬರಿಂದ ಹೃದಯ ಪಡೆದು ಅದನ್ನು ರಾವತ್ ಗೆ ಕಸಿ ಮಾಡಿ ಅಳವಡಿಸಲಾಯಿತು. ಮೊದಲ ಹಂತದಲ್ಲಿ ಆತನ ಹೃದಯ ಸರಿಯಾಗೇ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಹಂತ ಹಂತವಾಗಿ ಅವರಿಗೆ ವಿವಿಧ ತೊಂದರೆಗಳು ಕಾಣಿಸಲಾರಂಭಿಸಿದವು. ಕೊನೆಗೆ ಹೃದಯ ಅವರ ದೇಹಕ್ಕೆ ಹೊಂದಿಕೊಳ್ಳದ ಕಾರಣ ಮೂತ್ರಪಿಂಡದ ಸಮಸ್ಯೆಯೂ ತಲೆದೋರಿತು. ಡಯಾಲಿಸಿಸ್ ಮಾಡುವ ಅನಿವಾರ್ಯತೆ ಎದುರಾಯಿತು. ಜೊತೆಗೆ ಹೃದಯದ ಎರಡು ಕವಾಟಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.
ಇದೀಗ ಎಲ್ಲವನ್ನೂ ವೈದ್ಯರು ಸಮರ್ಪಕವಾಗಿ ನಿಭಾಯಿಸಿದ್ದು, ಮೂರು ತಿಂಗಳ ನಂತರ ರಾವತ್ ಗುಣಮುಖರಾಗಿದ್ದಾರೆ. ಇದೀಗ ಆಸ್ಪತ್ರೆಯಿಂದಲೂ ಬಿಡುಗಡೆ ಹೊಂದಿದ್ದಾರೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಹೃದಯ ಕಸಿ ವಿಭಾಗದ ಕೇವಲ್ ಕೃಷ್ಣಾ ತಿಳಿಸಿದ್ದಾರೆ.