ಚಲಿಸುತ್ತಿದ್ದ ರೈಲಿನ ಬಾಗಿಲಿನ ರಾಡ್ ಹಿಡಿದು ನಿಂತಿದ್ದ ಮಹಿಳೆಯೊಬ್ಬರು ತಮ್ಮ ಪತಿ ಹಿಡಿದಿದ್ದ ಕೈ ಬಿಟ್ಟಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.
37 ವರ್ಷದ ಈ ಮಹಿಳೆಯ ಪತಿ ಅನ್ವರ್ ಅಲಿ ಶೈಖ್ (39) ತನ್ನ ಪತ್ನಿ ಪೂನಮ್ ಚವಾಣ್‌ರನ್ನು ಕೊಲೆ ಮಾಡಿದ ಆಪಾದನೆ ಮೇಲೆ ಬಂಧಿತನಾಗಿದ್ದಾನೆ. ಇವರಿಬ್ಬರು ಕಳೆದ ತಿಂಗಳಷ್ಟೇ ಮದುವೆಯಾಗಿದ್ದು, ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ತನ್ನ ಹಿಂದಿನ ವಿವಾಹ ಸಂಬಂಧದಲ್ಲಿ ಜನಿಸಿದ್ದ ಮೂರು ವರ್ಷದ ಮಗಳೊಂದಿಗೆ ಇಲ್ಲಿನ ಮನ್‌ಖುರ್ದ್‌ನಲ್ಲಿ ತನ್ನ ಪತಿ ಶೈಖ್ ಜೊತೆಗೆ ಚವಾಣ್ ವಾಸವಿದ್ದರು. ಇಬ್ಬರಿಗೂ ಯಾವುದೇ ಸ್ಥಿರ ಆದಾಯದ ಮೂಲ ಇರಲಿಲ್ಲ. ಆಗಾಗ ಚಾಲಕ ವೃತ್ತಿ ಮಾಡುತ್ತಿದ್ದ ಶೈಖ್ ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಸೋಮವಾರದಂದು ಈ ಜೋಡಿ ಪನ್ವೆಲ್‌ನತ್ತ ಸಾಗುತ್ತಿದ್ದ ಲೋಕಲ್ ರೈಲಿನಲ್ಲಿ ಹೋಗುತ್ತಿದ್ದರು. ಮದ್ಯಾಹ್ನ 3:20ರ ವೇಳೆಗೆ ಚೆಂಬೂರ್ ಹಾಗೂ ಗೊವಾಂಡಿ ನಿಲ್ದಾಣಗಳ ನಡುವೆ ಬಾಗಿಲಿನ ರಾಡ್‌ಗೆ ಅಂಟಿಕೊಂಡಂತೆ ಗಿರಗಿರನೇ ತಿರುಗಲು ಆರಂಭಿಸಿದ ಚವಾಣ್ ಕೆಳಗೆ ಬಿದ್ದಿದ್ದಾರೆ.
ಚವಾಣ್ ಮೃತದೇಹವನ್ನು ಹಳಿ ಮೇಲಿನಿಂದ ರಿಕವರ್ ಮಾಡಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದು, ಆಕೆಯ ಮೇಲೆ ಪತಿ ಹಾಗೂ ಆತನ ಕುಟುಂಬದಿಂದ ಏನಾದರೂ ಕಿರುಕುಳ ನಡೆಯುತ್ತಿತ್ತೇ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.