1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನವನ್ನ ಕಂದಹಾರ್ನಲ್ಲಿ ಉಗ್ರರು ಹೈಜಾಕ್ ಮಾಡಿದ್ದ ವೇಳೆ ಕೇಂದ್ರ ಸಚಿವರಾಗಿದ್ದ ಮಮತಾ ಬ್ಯಾನರ್ಜಿ, ವಿಮಾನದಲ್ಲಿದ್ದ ಪ್ರಯಾಣಿಕರ ರಕ್ಷಣೆಗಾಗಿ ತಾವೇ ಒತ್ತೆಯಾಳಾಗಿ ಹೋಗಲು ಸಿದ್ಧರಾಗಿದ್ದರು ಎಂದು ಸ್ಫೋಟಕ ಹೇಳಿಕೆಯನ್ನ ಮಾಜಿ ಕೇಂದ್ರ ಸಚಿವರು ನೀಡಿದ್ದಾರೆ.
2018ರಲ್ಲಿ ಬಿಜೆಪಿಯನ್ನ ತ್ಯಜಿಸಿದ್ದ ಯಶವಂತ್ ಸಿನ್ಹಾ ಇಂದು ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಂದಹಾರ್ ಘಟನೆ ನಡೆದು 2 ದಶಕಗಳ ಬಳಿಕ ಯಶವಂತ್ ಸಿನ್ಹಾ ಈ ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ.
ಅಟಲ್ ಬಿಹಾರ್ ವಾಜಪೇಯಿ ಸರ್ಕಾರದ ಅವಧಿಯಲ್ಲಿ ನಾನು ಮಮತಾ ಬ್ಯಾನರ್ಜಿ ಜೊತೆ ಕೆಲಸ ಮಾಡಿದ್ದೆ. ಆಕೆ ಅಂದಿನಿಂದಲೂ ಒಬ್ಬ ಹೋರಾಟಗಾರ್ತಿಯಾಗಿದ್ದಳು ಹಾಗೂ ಆಕೆ ಈಗ ಕೂಡ ಹೋರಾಟಗಾರ್ತಿಯಾಗೇ ಇದ್ದಾರೆ ಎಂದು ಹೇಳಿದ್ದಾರೆ.
ಅಂದು ಇಂಡಿಯನ್ ಏರ್ಲೈನ್ ವಿಮಾನವನ್ನು ಉಗ್ರರು ಹೈಜಾಕ್ ಮಾಡಿದ್ದರು. ಈ ಸಂಬಂಧ ಕ್ಯಾಬಿನೆಟ್ನಲ್ಲಿ ಭಾರೀ ಚರ್ಚೆ ಏರ್ಪಟ್ಟಿತ್ತು. ಈ ವೇಳೆ ಮಮತಾ ವಿಮಾನದಲ್ಲಿ ಒತ್ತೆಯಾಳಾಗಿದ್ದ ಭಾರತೀಯರ ರಕ್ಷಣೆಗಾಗಿ ಅವರುಗಳ ಬದಲಿಗೆ ತಾವೇ ಉಗ್ರರ ಒತ್ತೆಯಾಳಾಗಲು ಸಿದ್ಧರಿದ್ದರು. ಆಕೆ ಎಂತಹ ತ್ಯಾಗಕ್ಕೂ ಸಿದ್ಧವಿದ್ದರು ಎಂದು ಹೇಳಿದ್ದಾರೆ.