ಈಗ್ಲಿಂದಲೇ ಪಶ್ಚಿಮ ಬಂಗಾಳ, ಚುನಾವಣಾ ರಣಾಂಗಣವಾಗಿ ಮಾರ್ಪಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಚುನಾವಣಾ ಪೈಪೋಟಿ ಶುರುವಾಗಿದೆ. ನಂದಿಗ್ರಾಮ್ ರ್ಯಾಲಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹತ್ವದ ಘೋಷಣೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಈ ಬಾರಿ ನಂದಿಗ್ರಾಮ್ ನಿಂದ ಸ್ಪರ್ಧೆ ನಡೆಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಯುದ್ಧ ಈಗಾಗಲೇ ಶುರುವಾಗಿದೆ. ಚುನಾವಣೆ ಗೆಲುವಿನ ಪಣ ತೊಟ್ಟಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮ್ ನಲ್ಲಿ ತೃಣಮೂಲ ಕಾಂಗ್ರೆಸ್ ರ್ಯಾಲಿ ನಡೆಸಿದ್ರು. ಈ ವೇಳೆ ನಂದಿಗ್ರಾಮ್ ನಿಂದ ಸ್ಪರ್ಧೆ ನಡೆಸುವ ಘೋಷಣೆ ಮಾಡಿದ್ರು. ಭವಾನಿಪುರದಿಂದಲೂ ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸಲಿದ್ದಾರೆ.
ನಂದಿಗ್ರಾಮ ಶುಭೇಂಡು ಅಧಿಕಾರಿ ಭದ್ರಕೋಟೆ. ಇತ್ತೀಚೆಗೆ ಶುಭೇಂಡು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ರ್ಯಾಲಿ ವೇಳೆ ಶುಭೇಂಡು ವಿರುದ್ಧವೂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಆಪರೇಷನ್ ಬಿಜೆಪಿ ಕೂಡ ಶುರುವಾಗಿದೆ. ಅಮಿತ್ ಷಾ ಭೇಟಿ ನಂತ್ರ ಶುಭೇಂಡು ಬಿಜೆಪಿ ಸೇರಿದ್ದಾರೆ. ಶುಭೇಂಡು ಕ್ಷೇತ್ರ ನಂದಿಗ್ರಾಮ್ ದಿಂದ ಸ್ಪರ್ಧೆ ನಡೆಸುವ ನಿರ್ಧಾರ ಘೋಷಣೆ ಮಾಡಿರುವ ಮಮತಾ ಬ್ಯಾನರ್ಜಿ ಈ ಮೂಲಕ ಬಿಜೆಪಿಗೆ ಸವಾಲೆಸೆದಿದ್ದಾರೆ.