ದೇಶದ ಮೊದಲ ಸೀಪ್ಲೇನ್ ಸೇವೆಯನ್ನು ಇದೇ ಅಕ್ಟೋಬರ್ 31ರಿಂದ ಆರಂಭ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ಪಟೇಲರ ಹುಟ್ಟುಹಬ್ಬದ ಪ್ರಯುಕ್ತ ಈ ಸೇವೆಯನ್ನು ಆರಂಭಿಸಲಾಗುತ್ತಿದೆ.
ಅಹಮದಾಬಾದ್‌ನ ಸಾಬರಮತಿ ರಿವರ್‌ಫ್ರಂಟ್‌ನಿಂದ ನರ್ಮದಾ ಅಣೆಕಟ್ಟೆಯ ಬಳಿ ಇರುವ ಸರ್ದಾರರ ಐಕ್ಯತಾ ಪ್ರತಿಮೆವರೆಗಿನ 205 ಕಿಮೀಗಳ ಹಾದಿಯಲ್ಲಿ ಈ ಸೀಪ್ಲೇನ್ ಸೇವೆಯನ್ನು ಒದಗಿಸಲಾಗುತ್ತಿದೆ. ಎರಡೂ ಕಡೆಗಳಲ್ಲಿ ತೇಲಾಡುವ ಜಟ್ಟಿ ಸೇರಿದಂತೆ ಅಗತ್ಯವಾದ ಮೂಲ ಸೌಕರ್ಯವನ್ನು ಸಿದ್ಧಪಡಿಸಲಾಗಿದೆ.
ಈ ಸೇವೆಯನ್ನು ಒದಗಿಸಲಿರುವ ಸ್ಪೈಸ್ ಜೆಟ್, ಮಾಲ್ಡೀವ್ಸ್‌ನಿಂದ ಒಂದು ಸೀಪ್ಲೇನ್ ಅನ್ನು ಖರೀದಿ ಮಾಡುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿದೆ. ಕೇಂದ್ರ ಸರ್ಕಾರದ ಉಡಾನ್ ಸೇವೆಯಡಿ ಈ ಸೀಪ್ಲೇನ್ ಯೋಜನೆಗೆ ನೆರವು ನೀಡಲಾಗುವುದು ಎಂದು ಕೇಂದ್ರ ಸಚಿವ ಮನ್‌ಸುಖ್ ಮಾಂಡವ್ಯ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಅಂಡಮಾನ್ & ನಿಕೋಬಾರ್, ಗುವಾಹಟಿ, ಉತ್ತರಾಖಂಡ್ ಸೇರಿದಂತೆ ದೇಶದ 16 ಕಡೆಗಳಲ್ಲಿ ಈ ಸೀಪ್ಲೇನ್ ಸೇವೆಯನ್ನು ಒದಗಿಸಲು ಕೇಂದ್ರ ನೌಕಾಯಾನ ಸಚಿವಾಲಯ ಚಿಂತನೆ ನಡೆಸಿದೆ.