ಅಹಮದಾಬಾದ್: ಅತ್ಯಾಚಾರ ಆರೋಪಿಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಲಂಚ ಪಡೆದ ಮಹಿಳಾ ಪಿಎಸ್ಐ ಶ್ವೇತಾ ಜಡೇಜಾ ಅವರನ್ನು ಬಂಧಿಸಲಾಗಿದೆ.
ಅಹಮದಾಬಾದ್ ಪಶ್ಚಿಮ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ವೇತಾ ಜಡೇಜಾ ಸಾಮಾಜಿಕ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದಿರಲು ಅತ್ಯಾಚಾರ ಆರೋಪಿಯಿಂದ ಲಂಚ ಪಡೆದುಕೊಂಡಿದ್ದರು.
2019 ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದು ಅತ್ಯಾಚಾರ ಎಸಗಿದ ಉದ್ಯಮಿ, ಆರೋಪಿ ಕೆನಾಲ್ ಶಾ ಸಹೋದರನಿಂದ 35 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸಾಮಾಜಿಕ ವಿರೋಧಿ ಚಟುವಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸದಿರಲು ಶ್ವೇತಾ ಜಡೇಜಾ ಹಣಕ್ಕೆ ಬೇಡಿಕೆ ಇಟ್ಟಿದ್ದು 20 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.
ಹೆಚ್ಚುವರಿಯಾಗಿ 15 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಬಿಟ್ಟಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದ. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಶ್ವೇತಾ ಜಡೇಜಾ ಅವರನ್ನು ಬಂಧಿಸಿದ್ದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಶ್ವೇತಾ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.