
ಮಹಾರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕ್ರೌರ್ಯ ನಡೆದಿರುವ ಕೇಸುಗಳೇ 90%ನಷ್ಟಿವೆ ಎಂದು ಪ್ರಜಾ ಪ್ರತಿಷ್ಠಾನ ಹೆಸರಿನ ಎನ್‌ಜಿಒನ ವರದಿಯೊಂದು ತಿಳಿಸುತ್ತಿದೆ.
2008-2012 ನಡುವಿನ ಅವಧಿಗಿಂತ 2013-2017ರ ಅವಧಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ತೆಗೆದುಕೊಳ್ಳುತ್ತಿದ್ದ ಸಮಯ ದುಪ್ಪಟ್ಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಮಹಿಳೆಯರ ಮೇಲಿನ ಕ್ರೌರ್ಯಗಳಲ್ಲಿ ಶಿಕ್ಷೆಯ ಪ್ರಮಾಣ 31% ಇದ್ದು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ 38%ನಷ್ಟು ಬಾರಿ ಮಾತ್ರ ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ತಿಳಿಸುತ್ತಿದೆ.
“ಬರೀ ವಿಶೇಷ ಕಾನೂನುಗಳನ್ನು ತಂದುಬಿಟ್ಟಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಇತ್ಯರ್ಥವಾಗುವುದಿಲ್ಲ. ಇಡೀಯ ವ್ಯವಸ್ಥೆಯನ್ನೇ ಬದಲಿಸಬೇಕಿದೆ” ಎಂದು ಪ್ರಜಾದ ಪ್ರಾಜೆಕ್ಟ್ ಕೋಆರ್ಡಿನೇಟರ್ ಜೆನಿಫರ್ ಸ್ಪೆನ್ಸರ್ ಹೇಳಿದ್ದಾರೆ.
ಮಕ್ಕಳ ಮೇಲಾಗುವ ದೌರ್ಜನ್ಯಗಳ ಆಲಿಕೆಯನ್ನು ವರ್ಷದೊಳಗೆ ಮಾಡಿ ಮುಗಿಸಿ ಶಿಕ್ಷೆಯ ಪ್ರಮಾಣ ನಿಗದಿ ಮಾಡಲು ತಂದಿರುವ ಪೋಕ್ಸೋ ಕಾಯಿದೆ ಅಡಿ 222 ಪ್ರಕರಣಗಳನ್ನು 2019ರಲ್ಲಿ ಎತ್ತಿಕೊಳ್ಳಲಾಗಿದೆ. ಇವುಗಳ ಪೈಕಿ 10% ನಷ್ಟು ಕೇಸುಗಳು ಮಾತ್ರವೇ ಅಂತ್ಯ ಕಂಡಿವೆ ಎಂದು ಸ್ಪೆನ್ಸರ್ ತಿಳಿಸಿದ್ದಾರೆ.