ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ವಿವಾಹವಾದ ನವಜೋಡಿ ಗಮನ ಸೆಳೆಯುವಂತಹ ಕೆಲಸವೊಂದನ್ನು ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ವಸಯ್ ಪ್ರದೇಶದ ನಂದಕಲ್ ಗ್ರಾಮದ 28 ವರ್ಷದ ಎರಿಕ್ ಲೋಬೊ ಮತ್ತು 27 ವರ್ಷದ ಎರಿಕ್ ಆಂಟನ್ ವಿವಾಹವಾದರು. ಈ ಸಂದರ್ಭದಲ್ಲಿ ಅವರು ಐವತ್ತು ಹಾಸಿಗೆಗಳು ಮತ್ತು ಆಕ್ಸಿಜನ್ ಸಿಲೆಂಡರನ್ನು ಆಸ್ಪತ್ರೆಗೆ ದಾನವಾಗಿ ನೀಡಿದರು.
ವಿವಾಹ ಸಮಾರಂಭವೆಂದರೆ ಕನಿಷ್ಠ ಎರಡು ಸಾವಿರ ಮಂದಿ ಭಾಗವಹಿಸುತ್ತಾರೆ, ಅವರಿಗೆ ಊಟೋಪಚಾರ, ವೈನ್ ಎಲ್ಲ ವ್ಯವಸ್ಥೆ ಮಾಡಲು ಸಾಕಷ್ಟು ಖರ್ಚಾಗುತ್ತದೆ. ನಾವು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆವು ಎಂದು ಲೋಬೋ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿವಾಹ ಸಂದರ್ಭದಲ್ಲಿ 22 ಅತಿಥಿಗಳು ಮಾತ್ರ ಪಾಲ್ಗೊಂಡಿದ್ದರು ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
ನಾವಿರುವ ಪಾಲ್ಗರ್ ಜಿಲ್ಲೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅನೇಕರು ಮೃತಪಟ್ಟಿದ್ದಾರೆ. ಹೀಗಾಗಿ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.