
ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಥಾಣೆ ಪೊಲೀಸರು ಏಳು ವರ್ಷದ ಬಾಲಕನ ಹುಟ್ಟುಹಬ್ಬ ಆಚರಿಸಿದ್ದಾರೆ. ಬಾಲಕನ ಪೋಷಕರಿಬ್ಬರಿಗೂ ಕೋವಿಡ್-19 ಸೋಂಕು ತಗುಲಿ, ಅವರು ಕ್ವಾರಂಟೈನ್ ನಲ್ಲಿರುವ ಕಾರಣ ಪೊಲೀಸರೇ ಹುಟ್ಟುಹಬ್ಬ ಆಚರಿಸಿದ್ದಾರೆ.
ಸೋಂಕು ಪೀಡಿತರೊಬ್ಬರು ತಮ್ಮ ಪುತ್ರನ ಹುಟ್ಟುಹಬ್ಬವನ್ನು ತಮ್ಮ ಪರವಾಗಿ ಆಚರಿಸಲು ಟ್ವೀಟ್ ಮೂಲಕ ಕೋರಿಕೊಂಡ ಕಾರಣ ತಮ್ಮ ಸಿಬ್ಬಂದಿ ಈ ರೀತಿ ಮಾಡಿದ್ದಾಗಿ ಹಿರಿಯ ಇನ್ಸ್‌ಪೆಕ್ಟರ್ ಚಂದ್ರಕಾಂತ್ ಜಾಧವ್ ತಿಳಿಸಿದ್ದಾರೆ.
ಇಲ್ಲಿನ ಖಾರ್ದಿಪಾಡಾದ ದಿವಾ ಟೌನ್‌ನಲ್ಲಿನ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬಾಲಕನ ಮನೆಗೆ ಆಗಮಿಸಿದ 10 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕಂಡು ಬಾಲಕ ಚಕಿತಗೊಂಡಿದ್ದಾನೆ. ತಮ್ಮೊಂದಿಗೆ ಹುಟ್ಟುಹಬ್ಬದ ಕೇಕ್ ತಂದಿದ್ದ ಪೊಲೀಸರು ಬಾಲಕನಿಗೆ ಕ್ರಿಕೆಟ್ ಸೆಟ್ ಹಾಗೂ ಆಟದ ಗನ್ ಕೊಟ್ಟು ಹಾರೈಸಿದ್ದಾರೆ. ಬಾಲಕನ ಪೋಷಕರು ನವಿ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಕೋವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದು, ಆತ ಈಗ ಅಜ್ಜ-ಅಜ್ಜಿಯ ಆರೈಕೆಯಲ್ಲಿ ಇದ್ದಾನೆ.