ಚುನಾವಣೆ ಸಂದರ್ಭದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಆದರೆ ಚುನಾವಣೆ ಮುಗಿದ ಬಳಿಕ ಬಹುಪಾಲು ಭರವಸೆಗಳು ಈಡೇರದೆ ಮರೀಚಿಕೆಯಾಗಿಯೇ ಉಳಿಯುತ್ತದೆ ಎಂಬುದು ಅಷ್ಟೇ ಸತ್ಯ. ಆದರೆ ಇಲ್ಲೊಬ್ಬ ಅಭ್ಯರ್ಥಿ ನೀಡಿರುವ ಭರವಸೆ ಮತದಾರರನ್ನೇ ಬೆಚ್ಚಿಬೀಳುವಂತೆ ಮಾಡಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಧುರೈ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಆರ್. ಸರವಣನ್ ಈಡೇರಿಸಲಾಗದ ಭರವಸೆಗಳನ್ನು ಮತದಾರರಿಗೆ ನೀಡಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಚುನಾವಣಾ ಪ್ರಣಾಳಿಕೆಯನ್ನು ಲೇವಡಿ ಮಾಡಿ ಮತದಾರರನ್ನು ಜಾಗೃತಗೊಳಿಸುವ ಸಲುವಾಗಿ ಸರವಣನ್ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆಂಬುದು ವಿಶೇಷ.
ಆ ಹೆಣ್ಣುಮಗಳು ಯಾರದೋ ಕುತಂತ್ರಕ್ಕೆ ಬಲಿಯಾಗಿದ್ದಾಳೆ – ಪ್ರಧಾನಿಗೆ ಸಂದೇಶ ರವಾನಿಸಿ ರಕ್ಷಣೆ ಪಡೆಯಲಿ; ಹೆಚ್.ಡಿ.ಕೆ. ಸಲಹೆ
ಚುನಾವಣೆಯಲ್ಲಿ ತಾವು ಗೆದ್ದರೆ ಚಂದ್ರಲೋಕಕ್ಕೆ 100ದಿನಗಳ ಟ್ರಿಪ್ ಕಳಿಸುವ ಭರವಸೆಯನ್ನು ಸರವಣನ್ ಮತದಾರರಿಗೆ ನೀಡಿದ್ದು, ಇದರ ಜೊತೆಗೆ ಕ್ಷೇತ್ರದ ಮತದಾರರೆಲ್ಲರಿಗೂ ಐಫೋನ್, ಈಜುಕೊಳ ಇರುವ ಮೂರು ಮಹಡಿ ಮನೆ, ಮದುವೆಯಾಗುವ ಹೆಣ್ಣು ಮಕ್ಕಳಿಗೆ ನೂರು ಚಿನ್ನದ ನಾಣ್ಯದ ಕೊಡುಗೆ, ಪ್ರತಿ ಕುಟುಂಬಕ್ಕೂ 20ಲಕ್ಷ ರೂ. ಮೌಲ್ಯದ ಕಾರು, ಪ್ರತಿ ಕುಟುಂಬಕ್ಕೂ ವಾರ್ಷಿಕವಾಗಿ ಒಂದು ಕೋಟಿ ರೂ. ಆರ್ಥಿಕ ನೆರವು ನೀಡುವ ಭರವಸೆಯನ್ನು ಸರವಣನ್ ನೀಡಿದ್ದಾರೆ.
ಅಲ್ಲದೆ ಮನೆ ಕೆಲಸಕ್ಕೆ ರೋಬೋಟ್ ನೀಡುವುದು, ಯುವ ಉದ್ಯಮಿಗಳಿಗೆ ಒಂದು ಕೋಟಿ ರೂಪಾಯಿ ನೆರವು, ವಿಕಲಚೇತನರಿಗೆ ಮಾಸಿಕ 10 ಲಕ್ಷ ರೂಪಾಯಿ ನೆರವು, ಜೊತೆಗೆ ಉರಿಬಿಸಿಲಿನಲ್ಲೂ ಕ್ಷೇತ್ರ ತಣ್ಣಗಿರಲು 300 ಅಡಿ ಎತ್ತರದ ಕೃತಕ ಹಿಮಚ್ಛಾದಿತ ಪರ್ವತಗಳ ನಿರ್ಮಾಣ ಸೇರಿದಂತೆ ಹತ್ತಾರು ಭರವಸೆಗಳನ್ನು ನೀಡಿದ್ದಾರೆ. ಒಂದೊಮ್ಮೆ ಮತದಾರರು ಇವರನ್ನು ಗೆಲ್ಲಿಸಿದರೆ ತಾವು ನೀಡಿದ ಭರವಸೆಗಳನ್ನು ಸರವಣನ್ ಈಡೇರಿಸುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.