ಚಿನ್ನವನ್ನು ತಮ್ಮ ಗುದದ್ವಾರದಲ್ಲಿಟ್ಟು ಸಾಗಿಸುತ್ತಿದ್ದ ಮಧುರೈ ಮೂಲದ ಇಬ್ಬರನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 52 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.
ದುಬೈನಿಂದ ಆಗಮಿಸಿದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನ ಗುದದ್ವಾರದಲ್ಲಿ ಪೇಸ್ಟ್ ರೂಪದಲ್ಲಿದ್ದ ಒಟ್ಟು 1.14 ಕೆ.ಜಿ. ತೂಕದ 51.8 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಬ್ಬರೂ ಮಧುರೈ ಮೂಲದವರಾಗಿದ್ದು, ಈ ಹಿಂದೆಯೂ 1.3 ಕೋಟಿ ಮೌಲ್ಯದ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಅತ್ತ ಕೇರಳದಲ್ಲಿ ಎನ್.ಐ.ಎ.ನಡೆಸುತ್ತಿರುವ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಖುರಾನ್ ವಿತರಣೆಯ ನೆಪದಲ್ಲಿ ಯುಎಇ ದಿಂದ ಡಿಪ್ಲೊಮ್ಯಾಟಿಕ್ ಮಾರ್ಗದಲ್ಲಿ ಚಿನ್ನ ಸಾಗಿಸಲಾಗಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಎನ್.ಐ.ಎ.ಅಧಿಕಾರಿಗಳು ಕೇರಳ ಉನ್ನತ ಶಿಕ್ಷಣ ಇಲಾಖೆಯ ಅಡಿ ಇರುವ ಸ್ವಾಯತ್ತ ಸಂಸ್ಥೆಯೊಂದಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.