ಕೋವಿಡ್-19 ಲಾಕ್‌ಡೌನ್ ಕಾರಣದಿಂದ ನಮ್ಮ ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಮಾಡುವ ರೀತಿಯೇ ಬದಲಾಗಿ ಹೋಗಿದೆ. ಡಿಜಿಟಲ್ ಸಂಪರ್ಕದಿಂದಾಗಿ ಬಹಳ ದೊಡ್ಡ ಮಟ್ಟದ ಬದಲಾವಣೆಯನ್ನೇ ಕಳೆದ ಹತ್ತು ತಿಂಗಳಿನಿಂದ ಕಂಡುಕೊಂಡಿದ್ದೇವೆ.
ಸಾಮಾನ್ಯವಾಗಿ ಮದುವೆ ಸಮಾರಂಭಗಳಿಗೆ ಹೋದಾಗ ವಧು-ವರರಿಗೆ ಕಾಂಪ್ಲಿಮೆಂಟ್ ಕೊಡಲೆಂದು ಮುಂದಾದಾಗ ಸರಿಯಾದ ಚೇಂಜ್, ಎನ್ವಲಪ್ ಹುಡುಕುವುದು ಒಮ್ಮೊಮ್ಮೆ ತ್ರಾಸದಾಯಕವಾಗಬಹುದು.
ಇದೀಗ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಹೇಗೂ ಜನರ ಖಾತೆಗಳಿಗೆ ಸೀದಾ ದುಡ್ಡು ವರ್ಗಾಯಿಸಬಹುದಲ್ಲ…? ಮದುವೆಯ ಲೈವ್ ಸ್ಟ್ರೀಮಿಂಗ್ ಮಾಡಿ, ದೂರದಿಂದಲೇ ಬಂಧುಗಳ ಆಶೀರ್ವಾದ ಕೋರುವ ಹಾಗೆಯೇ, ಆನ್ಲೈನ್ ಪಾವತಿ ಪ್ಲಾಟ್‌ಫಾರಂಗಳ ಮೂಲಕ ಮುಯ್ಯಿ ಸಂಗ್ರಹಿಸುವುದು!
ಮದುವೆ ಸಿರಿಯಲ್ಲಿರುವ ಮಧುರೈನ ಕುಟುಂಬವೊಂದು ಮದುಮಕ್ಕಳಿಗೆ ಕಾಂಪ್ಲಿಮೆಂಟ್ಸ್ ಕೊಡುವ ಕೆಲಸ ಸರಳಗೊಳಿಸಲು ಇದೇ ಗೂಗಲ್ ಪೇ ಹಾಗೂ ಫೋನ್ ಪೇಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಕ್ಯೂಆರ್ ಕೋಡ್ ಪ್ರಿಂಟ್ ಮಾಡಿಸಿ, ಅದನ್ನು ಆಹ್ವಾನ ಪತ್ರಿಕೆಯ ಮೇಲೆ ಹಾಕಿಸಿ, ಅವರ ಮುಯ್ಯಿಯ ದುಡ್ಡನ್ನು ಸೇರವಾಗಿ ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಮಾಡಿದೆ ಈ ಟೆಕ್ ಫ್ಯಾಮಿಲಿ.
ಭಾನುವಾರ ನಡೆದ ಈ ಮದುವೆಯ ಆಮಂತ್ರಣ ಪತ್ರ ಸಖತ್ ಸುದ್ದಿ ಮಾಡಿದೆ. “ಸುಮಾರು 30 ಅತಿಥಿಗಳು, ಈ ಸೌಲಭ್ಯ ಬಳಸುವ ಮೂಲಕ ವೆಡ್ಡಿಂಗ್ ಗಿಫ್ಟ್ ಕೊಟ್ಟಿದ್ದಾರೆ” ಎನ್ನುತ್ತಾರೆ ಮದುಮಗಳ ತಾಯಿ ಟಿ.ಜೆ. ಜಯಂತಿ.